ಮುಕ್ತಿ
	ಚತುರ್ವಿಧ ಪುರುಷಾರ್ಥಗಳ ಪೈಕಿ ಒಂದು ಧರ್ಮ, ಅರ್ಥ, ಕಾಮ ಉಳಿದ ಮೂರು ಮನುಷ್ಯನ ದೇಹ ಬಿದ್ದು ಹೋದಾಗ ಎಂದರೆ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದುವುದು. ಈ ಸ್ಥಿತಿ ಸ್ವರ್ಗಪ್ರಾಪ್ತಿಗಿಂತ ಮಿಗಿಲಾದರು. ಸ್ವರ್ಗಪ್ರಾಪ್ತಿ ಕೇವಲ ಪಾಪ ಪುಣ್ಯಗಳ ಫಲದಿಂದ ಲಭಿಸುವಂಥದ್ದು. ಅದು ಮುಗಿದ ಮೇಲೆ ಕರ್ಮಾನುಸಾರ ಆತ ಮರುಹುಟ್ಟು ಪಡೆಯಲೇಬೇಕು ಮುಕ್ತಿ ಸ್ಥಿತಿ ಇವಲ್ಲ. ಆತ್ಮಕ್ಕೆ ಮರುಹುಟ್ಟು ಇಲ್ಲದೆ ಅಗಣಿತ ಆನಂದಾತಿಶಯದಲ್ಲಿ ಸದಾಕಾಲ ಇರುವ ಸ್ಥಿತಿ. ಇದು ಭಾರತೀಯ ವೇದಾಂತ ದರ್ಶನಗಳ ಪ್ರಕ್ರಿಯೆ.

	ಮುಕ್ತಿ ಮತ್ತು ಮೋಕ್ಷ ಎರಡೂ ಸಮಾನಾರ್ಥಕ ಪದಗಳು. ಈ ಎರಡೂ ಪದಗಳು ಮುಚ್ ಎನ್ನುವ ಧಾತುವಿನಿಂದ ಉಂಟಾದವು. ಮುಕ್ತಿ ಎಂದರೆ ಬಿಡುಗಡೆ, ಸಂಸಾರ ಎಂಬ ಬಂಧನದಿಂದ ಬಿಡುಗಡೆ ಎಂದು ತಾತ್ಪರ್ಯ. ಈ ಮಾತಿನಲ್ಲಿ ಕಟ್ಟಿನಿಂದ ಕಳಚುವುದು. ಹಿಡಿತದಿಂದ ಸಡಿಲಿಸುವುದು. ಗಂಟನ್ನು ಬಿಚ್ಚುವುದು, ಅಲಂಬನೆಯನ್ನು ಬಿಡುವುದು ಎನ್ನುವ ವಿವರಗಳು ಅಡಗಿದೆ. ಸೂರ್ಯ, ಚಂದ್ರಗ್ರಹಣದ ಸಂಬಂಧವಾಗಿಯೂ ಮೋಕ್ಷ ಎನ್ನುವ ಮಾತನ್ನು ಗ್ರಾಸ ಎನ್ನುವುದಕ್ಕೆ ವಿರುದ್ಧಾರ್ಥದಲ್ಲಿ ಬಳಸಲಾಗುತ್ತದೆ. ಗ್ರಾಸ ಹಿಡಿಯುವುದು. ಮೋಕ್ಷ ಬಿಡುವುದು. ವೇದಾಂತವೇ ಮೊದಲಾದ ದರ್ಶನಗಳ ಪ್ರಕ್ರಿಯೆಗಳಲ್ಲಿ ಮೋಕ್ಷ ಪ್ರಧಾನವಾದುದು. ಇಲ್ಲಿ ಸಂಸಾರ ಆತ್ಮನ ನಿತ್ಯಶುದ್ಧಬುದ್ಧಸ್ವರೂಪವನ್ನು ಮರೆಮಾಡುತ್ತದೆಂದೂ ಆತ್ಮ ಸ್ವರೂಪ ತಳೆಯುವಾಗ ಈ ಮರೆಮಾಡುವ ಆವರಣ ಕಳಚಿಬೀಳುವುದೆಂದೂ ಅದೇ ಮೋಕ್ಷವೆಂದೂ ಕಲ್ಪನೆ. ಎಲ್ಲ ದರ್ಶನಗಳಲ್ಲಿಯೂ ಮೋಕ್ಷ ಎಂಬುದು ಹೊಸದಾಗಿ ಪಡೆಯುವ ಸ್ಥಿತಿಯಲ್ಲ. ಇರುವ ಅಡ್ಡಿಗಳನ್ನು ಹೋಗಲಾಡಿಸಿದಾಗ ಒದಗುವ ನೈಜ ಅನುಭವ ರೋಗ ಬಂದಾಗ ಔಷಧಸೇವನೆಯಿಂದ ರೋಗ ಕಳೆದುಕೊಳ್ಳುವಂತೆ. ಹೇಯವಾದುದು ಹಾನವಾದರೆ, ಒಂದು ನೆಮ್ಮದಿ ಒದಗುತ್ತದೆ. ಆರೋಗ್ಯ ಎನ್ನುವುದು ರೋಗ ಇಲ್ಲದಿರುವಿಕೆ. ರೋಗ ಬಂದು ಅದು ಗುಣವಾದರೆ ಆರೋಗ್ಯದ ಅನುಭವ ಮತ್ತೆ ಒದಗುವಂತೆ ಸಂಸಾರದ ಸಂಬಂಧವಿದ್ದು ಅದು ಯೋಗಾದಿ ತಂತ್ರಗಳಿಂದ ಪರಿಹಾರವಾದರೆ ಮೋಕ್ಷ ಎನಿಸಿಕೊಳ್ಳುತ್ತದೆ. ರೋಗ ಒದಗುವ ಮೊದಲೂ ಆರೋಗ್ಯವೇ ಇರುತ್ತದೆ. ಆದರೆ ರೋಗ ಬಂದಾಗಲೇ ಅದರ ಗುಣ ತಿಳಿಯುವುದು. ಈ ಅರ್ಥದಲ್ಲಿ ಮೋಕ್ಷ ಸಂಕ್ರಾಂತವಾದ ಆವರಣದ ಅಥವಾ ಪ್ರತ್ಯವಾಯದ ತಿರೋಧಾನದಷ್ಟೆ ಮೋಕ್ಷ ಈ ಅರ್ಥದಲ್ಲಿ ಬಂಧನಾಶ್ರತವಾದುದು. ಬಂಧನವಿಲ್ಲದೆ ಮೋಕ್ಷವಿಲ್ಲ. ಪ್ರಪಂಚದ ಉತ್ಪತ್ತಿಯಿಲ್ಲದೆ ಅದು ಉಪಶಮನವಾಗುವುದು ಹೇಗೆ ? ಪ್ರಪಂಚೋಪ ಶಮನವೇ ಮೋಕ್ಷವಷ್ಟೆ.

	ಆದರೆ ಮೋಕ್ಷ ಎಂದರೆ ಒಂದು ಸಾಕ್ಷಾತ್‍ಸ್ಥಿತಿಯಲ್ಲ ಇನ್ನೊಂದು ಸ್ಥಿತಿಯ ಅಭಾವವಷ್ಟೆ ಎನ್ನಲಾಗದು. ಸ್ವಾತಂತ್ರ್ಯ ಎಂದರೆ ಯಾವಾಗಲೂ ಬಂಧನಾಶ್ರೀತವೇ ಅಲ್ಲ: ಬಂಧ ಬರುವ ಮೊದಲೂ ಆ ಸ್ಥಿತಿ ಇರುತ್ತದೆ. ಬಂಧ ತೀರಿಕೊಂಡ ಮೇಲೂ ಮೊದಲ ಸ್ಥಿತಿಯನ್ನು ಮತ್ತೆ ಅನುಭವಿಸುವಾಗ ಅದು ಮತ್ತೊಂದು ಸ್ಥಿತಿಯೇ. ಈ ಸ್ಥಿತಿಗೆ ಪ್ರಾದುರ್ಭಾವವುಂಟು. ಈ ಸ್ಥಿತಿಯಲ್ಲಿ ವಿಶಿಷ್ಟ ಅನುಭವಗಳುಂಟು. ನೈಜಸುಖಾನುಭುತಿಯೇ ಮೋಕ್ಷವಾದರೂ ಅದರ ಪ್ರಾಪ್ತಿಗೆ ಸಾಧನಗಳುಂಟು. ಇರುವುದು ಹೋಗುವುದಕ್ಕಿಂತ, ಇಲ್ಲದಿರುವುದು ಒದಗುವುದೇ ಮೋಕ್ಷ ಎನ್ನುವ ಮಾತಿನ ಮುಖ್ಯ ಅರ್ಥ. ಬೌದ್ಧದ ನಿರ್ವಾಣದಲ್ಲಿಯೂ ಅಚಲವಾದ ಶಾಂತಿಯದುವು ವಿವರಗಳಿವೆ. ಇದು ಸಾಧನೆಯ ಫಲವಾಗಿ ಉಂಟಾಗುವ ವಿವರ. ಇದನ್ನು ಸಿದ್ಧಿಸಿಕೊಂಡು ಭಿಕ್ಷು ಕೃತಕರಣೀಯನಾಗುತ್ತಾನೆ. ಅವರಲ್ಲಿ ನಿರ್ವಾಣ 'ಓಹಿತಭಾರ (ಎಂದರೆ ಭಾರವನ್ನು ಕೆಳಗೆ ಇಳಿಸುವುದು) ಎನ್ನುವ ಅರ್ಥವೂ ಉಂಟು. ಹೊತ್ತ ಭಾರ ಕೆಳಗಿಳಿಸಿದಾಗ ಉಂಟಾಗುವ ಸಮಾಧಾನ ಹೊಸ ವಿವರವಷ್ಟೆ. ಮೋಕ್ಷ ಎನ್ನುವುದು ನಿರ್ದಿಷ್ಟವಾದ ಒಂದು ಸ್ವತಂತ್ರ್ಯ ಸ್ಥಿತಿ.

	ಕ್ರೈಸ್ತರಲ್ಲಿ ಮೋಕ್ಷ (ಸಾಲ್ವೇಷನ್) ಎಂದರೆ ಪೂರ್ವದಲ್ಲಿ ಇರದಂಥ ನೂತನ ಸ್ಥಿತಿ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಈ ಕಲ್ಪನೆಯುಂಟು. ಈಶ್ವರನ ಸಾನ್ನಿಧ್ಯ ಸೇರುವ ಒಂದು ಪ್ರಯತ್ನ ವಿಶೇಷ. ಮೋಕ್ಷಕ್ಕೆ ಕಾರಣ ಎಂದು ಬಗೆಯುವವರು ಕೂಡ ಮೋಕ್ಷದ ನಿರ್ದಿಷ್ಟಸ್ಥಿತಿಯನ್ನು ಒಪ್ಪಿಕೊಳ್ಳುತ್ತಾರೆ. ಭಾರತೀಯ ದರ್ಶನಗಳಲ್ಲಿ ಸ್ವರ್ಗಪ್ರಾಪ್ತಿಗೂ ಮೋಕ್ಷಕ್ಕೂ ಭೇದವಿದೆ. ಭಗವಂತನಿರುವ ವೈಕುಂಠ, ಕೈಲಾಸ ಅಥವಾ ಪರಲೋಕ ಮೋಕ್ಷದಪ್ರತೀಕ ಎಂದು ಹೇಳಬಹುದಾದರೂ ಮೋಕ್ಷವೆನ್ನುವುದು ಜೀವದ ಒಂದು ಸ್ಥಿತಿ ಎನ್ನುವುದನ್ನು ಮರೆಯಲಾಗದು.

	ಮೋಕ್ಷ ಪ್ರಪಂಚೋಪಶಮ ಎನ್ನುವ ಕಲ್ಪನೆಗೆ ಪೂರಕವಾಗಿ ಮೋಕ್ಷ ಅದಲ್ಲ. ಇದಲ್ಲ ಎನ್ನುವ ವರ್ಣನೆಗಳು ಇವೆ. ನಿದರ್ಶನಕ್ಕೆ ಮೋಕ್ಷ ಅ-ಭಯ. ಅ-ಪಾಪ ಅ-ಮೃತ, ಅ-ಸಂಸ್ಪøಷ್ಟ. ಅ-ಜರ. ಅ-ಕಲ್ಮಷ ಇತ್ಯಾದಿ. ಭಯ ರಾಗ ಜನ್ಮ ಮೃತ್ಯು, ಜರಾ, ವ್ಯಾಧಿ ಪಾರತಂತ್ರ್ಯ ಮೊದಲಾದ ಲಕ್ಷಣಗಳೆಲ್ಲ ಸಂಸಾರಕ್ಕೆ ಅನ್ವಯಿಸುತ್ತವೆ. ಜೀವಪ್ರಪಂಚದಲ್ಲಿ ಅಡ್ಡಾಡುವುದಕ್ಕೆ ಸಂಸಾರ ಎನ್ನುವುದು (ಸಂಸರಂತಿ): ಹುಟ್ಟಿನಿಂದ ಮುಪ್ಪಿಗೆ. ಮುಪಿನಿಂದ ಸಾವಿಗೆ. ಸಾವಿನಿಂದ ಮತ್ತೆ ಹುಟ್ಟಿಗೆ ಹೀಗೆ ಅಲೆದಾಟ ಸಂಸಾರವೆಂಬ ಮಾತಿಗೆ ಮುಖ್ಯ ವಿವರ. ಅಲೆದಾಟ ನಿಲ್ಲುವುದು ಅಥವಾ ಸಂಸಾರದಿಂದ ಬಿಡುಗಡೆ ಮೋಕ್ಷ ಎನಿಸಿಕೊಳ್ಳುತ್ತದೆ (ಸಂಸಾರಾನ್ಮುಚ್ಯತೇ): ರಾಗ ದ್ವೇಷಾದಿಗಳು, ಸಂಶಯಾದಿಗಳು, ಕರ್ಮಗಳು, ಇವೂ ಸಂಸಾರದ ಲಕ್ಷಣಗಳು: ಇವು ಅಡಗಿದರೂ ಅದು ಮೋಕ್ಷವನಿಸಿಕೊಳ್ಳುತ್ತದೆ (ಭಿದ್ಯತೇ ಹೃದಯಗ್ರಂಥ; ಛಿದ್ಯಂತೆ ಸರ್ವಸಂಶಯಾಃ ಕ್ಷೀಯಂತೇ ಚಾಸ್ಯ ಕರ್ಮಾಣಿ). ಇಲ್ಲಿ ಮೋಕ್ಷವನ್ನು ಬಣ್ಣಿಸುತ್ತ ಭೇದನ, ಛೇದನ, ಕ್ಷಯ ಎನ್ನುವ ಮಾತುಗಳನ್ನು ಬಳಸಿರುವುದು ಗಮನಾರ್ಹ. ಅನಿಷ್ಟವೂ ದುಃಖಕರವೂ ಅವ ಸ್ಥಿತಿಯೊಂದರ ಪ್ರಧ್ವಂಸಾಭಾವವೇ ಮೋಕ್ಷ ಎಂದು ತಾತ್ಪರ್ಯ.

	ಚತುರ್ವಿಧ ಪುರಷಾರ್ಥಗಳಲ್ಲಿ ಮೋಕ್ಷ ಒಂದು ಎನ್ನುವಾಗ ಅದು ಒಂದು ವಿಶಿಷ್ಟ ಸ್ಥಿತಿ ಎನ್ನುವುದೇ ಗಮಕ. ಧರ್ಮ ಅರ್ಥ, ಕಾಮಗಳನ್ನು ತ್ರಿವರ್ಗವೆಂದು ಪರಿಗಣಿಸಿ ಅದನ್ನು ಮೀರಿದುದು ಪರಮಪುರುಷಾರ್ಥ ಎಂದಿದ್ದಾರೆ. ಅದಕ್ಕಾಗಿ ಪ್ರಯತ್ನ ಪಡುವ ಆಶ್ರಮ ಸಂನ್ಯಾಸ ಎಂದೂ ಕಲ್ಪನೆ. ಪ್ರಪಂಚದ ಇತಿಮಿತಿಗಳನ್ನು ಮೀರಿ. ಅದರ ಕಷ್ಟಸುಖಗಳನ್ನೆಲ್ಲ ಬಿಟ್ಟು ಪರಾತ್ಪರವಾದುದನ್ನು ಪಡೆಯುವಾಗ ಸುಕೃತಿ-ದುಷ್ಕøತ. ಪುಣ್ಯ-ಪಾಪಗಳನ್ನೂ ಬಿಡಬೇಕೆಂದಿದ್ದಾರೆ (ಪುಣ್ಯಪಾಪೇ ವಿಧೂಯ ಪರಾತ್ಪರಂ ಪುರುಷಂ ಉಪೈತಿ ದಿವ್ಯಂ). ಪುಣ್ಯದಿಂದ ಸದ್‍ಗತಿ. ಸ್ವರ್ಗಲೋಕ ಪ್ರಾಪ್ತಿಯಾದರೆ ಮೋಕ್ಷ ಅದಕ್ಕಿಂತಲೂ ಮಿಗಿಲಾದದು: ಅದನ್ನು ಪಡೆದ ಮೇಲೆ ಅದಕ್ಕೆ ಹೆಚ್ಚಿನದು ಯಾವುದೂ ಇರದು (ಯಂ ಲಬ್ದ್ವಾ ನಾಪರಂ ಮನ್ಯತೇ). ಈ ಕಾರಣದಿಂದಲೇ ಮೋಕ್ಷಕ್ಕೆ ಅಪುನರಾವರ್ತಿ (ಮತ್ತೆ ಇಲ್ಲಿಗೆ ಬರಬೇಕಾದ ಅಗತ್ಯವಿಲ್ಲದೆ ಇರುವ) ಸ್ಥಿತಿ ಎನ್ನುತ್ತಾರೆ. ಮುಕ್ತರಾದವರು ಜನ್ಮಬಂಧ ವಿನಿರ್ಮುಕ್ತರು. ತೊಟ್ಟಿನಿಂದ ಬಿಡಿಸಿದ ಸೋರೆಬುರುಡೆಯಂತೆ ಮೋಕ್ಷದ ಸ್ಥಿತಿ ಎನ್ನುವ ಉಪಮೆ ದೈದಿಕವಾಙ್ಮಯದಲ್ಲಿಯೇ ಬರುತ್ತದೆ.

	ಮೋಕ್ಷದಲ್ಲಿ ಜೀವನ್ಮುಕ್ತಿ, ವಿದೇಹಮುಕ್ತಿ ಎಂದು ಎರಡು ಬಗೆ. ದೇಹಪತನವಾಗುವ ಮೊದಲೇ ಕರ್ಮಕ್ಷಯವಾಗಿ ಮುಕ್ತಿದೊರೆತರೂ ಆಯುಷ್ಯಮುಗಿಯುವಷ್ಟು ಸಮಯವೂ ಮುಕ್ತನಾದವ ಬದುಕಿಯೇ ಇದ್ದು ದೇಹಕ್ಕೆ ಸಹಜವಾದ ಕೆಲಸಗಳನ್ನು (ಶಾರೀರಂ ಕೇವಲಂ ಕರ್ಮ) ಮಾಡುತ್ತಾ ಇರುತ್ತಾನೆ. ಇದು ಜೀವನ್ಮುಕ್ತಿ. ಅವನು ಕೆಲಸವನ್ನು ಮಾಡುವಾಗ ಅದರ ಬಂಧವಿರುವುದಿಲ್ಲ. ಜಗತ್ತಿನಲ್ಲಿ ಮುಕ್ತಿ ಜೀವಿಸಿ ವ್ಯವಹರಿಸುತ್ತಿದ್ದರೂ ಅದರ ಪರಿಪಾಕವಿರುವುದಿಲ್ಲ. ಬೇರುಗಳನ್ನು ಹೊರತೆಗೆದ ತಾಳೆಮರದಂತೆ ಅವನ ಬದುಕು ಎಂದು ಹಳೆಯ ಉಪಮಾನ. ಈ ಸ್ಥಿತಿಯನ್ನೆ ಬೌದ್ಧರು 'ಸಉಪಾಧಿಶೇಷ-ನಿರ್ವಾಣ' ಎಂದು ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞೆ ಎಂದು ನಿರ್ದೇಶಿಸಿರುವುದು ಇದನ್ನೇ. ಇಂಥವನ ಆಯುಸ್ಸು ತೀರಿ ಸತ್ತರೆ ಅವನಿಗೆ ಪುನರ್ಭವವಿಲ್ಲ; ಆಗಾಮಿ, ಸಂಚಿತ, ಪ್ರಾರಬ್ಧ ಕರ್ಮಗಳೆಲ್ಲ ಅವನ ಪಾಲಿಗೆ ಮುಗಿಯುತ್ತದೆ; ಬೀಜ ಸುಟ್ಟಾಗ ಮೊಳಕೆ ಬರುವುದಿಲ್ಲವಷ್ಟೆ, ಹಾಗೆಯೇ ಇವನ ಬದುಕೂ. ಈ ಸ್ಥಿತಿ ವಿದೇಹ ಮುಕ್ತಿ, ಬೌದ್ಧರೂ ಇದನ್ನು ಪರಿನಿರ್ವಾಣ ಎನ್ನುತ್ತಾರೆ. ಇದು ನಿರುಪಾಧಿಶೇಷ, ನಿರಾಲಂಬ, ಈ ವಿಭಜನೆಯಿಂದ ಮುಕ್ತಿ ಒಂದು ವಿಶಿಷ್ಟ ಸ್ಥಿತಿಯೆನ್ನುವುದು ಸ್ಪಷ್ಟವಾಗುತ್ತದೆ. ಅಭಾವವೇ ಅದರ ಮುಖ್ಯರಸವಲ್ಲ.

	ಪಾಪಗಳಿಂದಲೂ ಮರಣದಿಂದಲೂ ಪಾರಾಗುವ ತಂತ್ರ ಅರಸುವ ಹವ್ಯಾಸ ವೈದಿಕ ವಾಙ್ಮಯದಲ್ಲಿ ಕಾಣುತ್ತದೆ. ಶತಪಥ ಬ್ರಾಹ್ಮಣದಲ್ಲಿ ಈ ವಿಧಿಯನ್ನು 'ಸ್ಪøತ ಎಂದು ಕರೆದು ಅದರ ವಿವರಗಳನ್ನು ಹೇಳಿದ್ದಾರೆ. ನಿತ್ಯವೂ ಗಾರ್ಹಸ್ಪತ್ಯಾಗ್ನಿಯನ್ನು ಆರಾಧಿಸಿದ್ದಾರೆ ಮರಣ ಅವನನ್ನು ಮುಟ್ಟಲಾರದು ಎಂದು ಇಲ್ಲಿಯ ವಿವರ. ಬಂಧನದಿಂದ ಸ್ವತಂತ್ರವಾದ ಚೇತನದ ಕಲ್ಪನೆ ಇಲ್ಲಿ ತಲೆ ದೋರಿದೆ. ಐತರೇಯ ಆರಣ್ಯಕದಲ್ಲಿ ಎಲ್ಲ ಬಯಕೆಗಳೂ ಕೈಗೂಡುವ (ಆಪ್ತಕಾಮ) ಸ್ಥಿತಿಯನ್ನು ಮುಟ್ಟುವ ವಿಧಿ ಉಕ್ತವಾಗಿದೆ. ತೈತೀರಿಯ ಮತ್ತು ಛಾಂದೀಗ್ಯ ಉಪನಿಷತ್ತುಗಳಲ್ಲಿ ಮುಕ್ತಿಯ ಪ್ರಸ್ತಾಪ ಸುಮಾರು ಇದೇ ನೆಲೆಯಲ್ಲಿಯೇ ಬರುತ್ತದೆ. ವಿಮೋಕ್ಷ ಎನ್ನುವ ಮಾತು ಛಾಂದೋಗ್ಯದಲ್ಲಿ ಬರುತ್ತದೆ; ಗಂಧಾರದಿಂದ ಕಣ್ಣು ಕಟ್ಟಿ ಕಾಡಿನಲ್ಲಿ ಬಂದವ ಮತ್ತೆ ಕಾಣುವಂತಾಗಿ ತನ್ನ ಊರಿಗೆ ಹಿಂದಿರುಗುವ ಸಂದರ್ಭದಲ್ಲಿ ಈ ಮಾತು ಬಂದಿದೆ. 'ರಾಹುವಿನಿಂದ ಚಂದ್ರ ಮುಕ್ತನಾದಂತೆ ನಾನು ಈ ದೇಹದಿಂದ ಮುಕ್ತನಾಗಿ ಬ್ರಹ್ಮಲೋಕಕ್ಕೆ ಹೋಗುವೆ ಎಂದು ನಿರ್ದೇಶಿಸಿದೆ. ಸಾವಿನ ದವಡೆಯಿಂದ ಪಾರಾಗುವುದೇ ಮುಕ್ತಿ ಎನ್ನುವ ಕಲ್ಪನೆ ಎಲ್ಲ ಉಪನಿಷತ್ತುಗಳಲ್ಲಿಯೂ ಉಂಟು. ಕಠೋಪನಿಷತ್ತಿನಲ್ಲಿ 'ವಿಮುಕ್ತಶ್ಚ ವಿಮುಚ್ಯತೇ ಎನ್ನುವ ಉಲ್ಲೇಖವಿದೆ. ಮುಕ್ತಿಯ ಕಲ್ಪನೆ ಪ್ರೌಢವಾಗಿ ಕಾಣುವುದು ಬೃಹದಾರಣ್ಯಕ ಉಪನಿಷತ್ತಿನಲ್ಲಿ. ಮುಕ್ತಿಯ ಲಕ್ಷಣಗಳನ್ನೂ ವಿವರಗಳನ್ನೂ ಹೇಳಿ 'ಸಾ ಮುಕ್ತಿಃ ಸಾ ಅತಿಮುಕ್ತಿಃ' ಎಂದು ಹೇಳಿದೆ. ಸ್ವರ್ಗವೇ ಅಮೃತಸ್ಧಳವೆಂಬ ಭಾವನೆ ಬೇರೂರಿದ್ದ ವೈದಿಕಯುಗದಲ್ಲಿ ಸ್ವರ್ಗವನ್ನೂ ಮೀರಿದದು ಮುಕ್ತಿ ಎನ್ನುವುದು ತಡವಾಗಿ ಬಂದ ಕಲ್ಪನೆ. ಬೃಹದಾರಣ್ಯಕದಲ್ಲಿ 'ಉತ್ಕ್ರಮ್ಯ ಸ್ವರ್ಗಂ ಲೋಕಂ ಇತೋ ವಿಮಯಕ್ತಾಃ' ಎನ್ನುವ ಮಾತು ಗಮನಾರ್ಹವಾದುದು. ಸ್ವರ್ಗ ಎಷ್ಟೆಂದರೂ ಕಾವ್ಯಫಲ; ಮುಕ್ತಿಯಲ್ಲಿ ಕಾಮ್ಯದ ಗಂಧವಿರುದು. ಪುಣ್ಯ ಮುಗಿದರೆ ಮತ್ರ್ಯಕ್ಕೆ ಮತ್ತೆ ಬರುವ ಹೆದರಿಕೆಯುಂಟು ಸ್ವರ್ಗದಲ್ಲಿ (ಕ್ಷೀಣೇ ಪುಣ್ಯೇ ಮತ್ರ್ಯಲೋಕಂ ವಿಶಂತಿ). ಆದರೆ ಮುಕ್ತಿಯಿಂದ ಕೆಳಗೆ ಬೀಳುವ ಭೀತಿಯಿಲ್ಲ. ಮುಕ್ತಿಯಲ್ಲಿ ಈ ಅಭಯವೇ ಮುಖ್ಯವಾದ ವಿವರ.

	ಉಪನಿಷತ್ತುಗಳಲ್ಲಿ ಮುಕ್ತಿ ಉಪನಿಷತ್ತೆಂಬುದು ಒಂದುಂಟು. ಮೋಕ್ಷ ಬಯಸುವವ ಮಾಂಡೂಕ್ಯ ಉಪನಿಷತ್ತನ್ನು ಅಧ್ಯಯನ ಮಾಡಬೇಕೆಂದು ಈ ಉಪನಿಷತ್ತು ಸೂಚಿಸುತ್ತದೆ. ಸರ್ವಸಾರೋಪನಿಷತ್ತಿನಲ್ಲಿ ಮೋಕ್ಷವನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಲಾಗಿದೆ. ಸರ್ವಸಾರೋಪನಿಷತ್ತಿನಲ್ಲಿ ಮೋಕ್ಷವನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಲಾಗಿದೆ. ದೇಹದ ಬಂಧನದಿಂದ ಪಾಪಗಳ ಸಂಕೋಲೆಯಿಂದ ಮತ್ತು ರಾಗದ್ವೇಷಾದಿಗಳಿಂದ ಬಿಡುಗಡೆಯೇ ಮೋಕ್ಷ ಎನ್ನುವ ನಿಲವು ಇಲ್ಲಿ ಮಾತ್ರವಲ್ಲದೆ ಮಹಾಭಾರತದಲ್ಲಿಯೂ ಭಗವದ್ಗೀತೆಯಲ್ಲಿಯೂ ಕಾಣಬರುತ್ತದೆ. ಮೋಕ್ಷಧರ್ಮವನ್ನು ಹೇಳುವ ದೊಡ್ಡ ಪರಿಚ್ಛೇದವೆ ಮಹಾಭಾರತದಲ್ಲಿ ಉಂಟು. ಇಲ್ಲಿ ಸನ್ಯಾಸಿಗಳಿಗೆ ಯೋಗ್ಯವಾದ ಧರ್ಮ ಇದು ಎನ್ನುವ ಸೂಚನೆ ಕಾಣಬರುತ್ತದೆ. ವ್ಯವಹಾರದಲ್ಲಿರುವ ಗೃಹಸ್ಥರಿಗಾಗಲೀ ಬ್ರಹ್ಮಚಾರಿಗಳಿಗಾಗಲೀ ಈ ಗುರಿಯನ್ನು ಹೇಳಿಲ್ಲ; ಜೀವನವನ್ನು ಸಾಕಷ್ಟು ನಡೆಸಿ. ವ್ಯವಹಾರದಿಂದ ವಿಶ್ರಾಂತರಾದ ವಾನಪ್ರಸ್ಥರಿಗೂ ಸನ್ಯಾಸಿಗಳಿಗೂ ಮೋಕ್ಷ ಗಮ್ಯಸ್ಥಾನ, ಪ್ರಾಪ್ತವ್ಯ ಎನ್ನುವ ನಿಲವು ಇಲ್ಲಿ ಕಾಣಿಸುತ್ತದೆ. ಇದು ಗಮನಾರ್ಹವಾದುದು.

	ಭವಬಂಧನಕ್ಕೆ ಮೂಲಕಾರಣ ಕರ್ಮವಾದರೆ ಮೋಕ್ಷಕ್ಕೆ ನೆರವಾಗುವುದು ಜ್ಞಾನ. ಕರ್ಮವನ್ನು ಉಂಟುಮಾಡುವುದು ಅಜ್ಞಾನ ಅಥವಾ ಅವಿದ್ಯೆಯೆನಿಸಿಕೊಳ್ಳುತ್ತದೆ. ಅಜ್ಞಾನದಿಂದಲೇ ತನ್ನ ಸ್ವರೂಪಜ್ಞಾನ ಮರೆಯಾಗಿ ಜೀವನಿಗೆ ತಾನೇ ಶರೀರ, ತಾನು ದುಃಖಿ, ಅಲ್ಪಜ್ಞ ಎನ್ನುವ ಭ್ರಮೆ ಉಂಟಾಗುತ್ತದೆ. ಈ ದೇಹಾತ್ಮ ಭಾವನೆಯೇ ನಮ್ಮ ಪ್ರಾಪಂಚಿಕ ವ್ಯಸನಗಳಿಗೆಲ್ಲ ಅಧಿಷ್ಠಾನ. ಜ್ಞಾನ ಎಂಬುದು ಬೆಳಕಾದರೆ ಅಜ್ಞಾನ ಅಂಧಕಾರ. ಗುರೂಪದೇಶದಿಂದ ಶೀಲಶುದ್ಧಿಯಿಂದ ಅಜ್ಞಾನ ತಿಮಿರ ಕಳೆದಾಗ ಕಣ್ಣು ತೆರೆಯುತ್ತದೆ (ಉನ್ಮೀಲಯುತೆ ಚಕ್ಷುಃ). ತತ್ತ್ವಜ್ಞಾನ ಎಂದರೆ ಯಥಾರ್ಥಜ್ಞಾನ; ಅಜ್ಞಾನ ಅನೃಥಾಜ್ಞಾನ. ಜ್ಞಾನದಿಂದ ಆತ್ಮ ನಿತ್ಯ, ಶುದ್ಧ, ಬುದ್ಧ, ಮುಕ್ತ ಎನ್ನುವ ಜ್ಞಾನ ಒದಗುತ್ತದೆ. ವ್ಯಾವಹಾರಿಕ ನೆಲೆಯಲ್ಲಿ ಮಾಡುವ ಕರ್ಮಗಳು ಬಂಧನಕ್ಕೆ ಕಾರಣವಾದರೆ. ಜ್ಞಾನಿಗಳು ಮಾಡುವ ಕರ್ಮ ಲೋಕಸಂಗ್ರಹದ ದೃಷ್ಟಿಯಿಂದ ಸಿದ್ಧವಾಗಿದೆ. ಜ್ಞಾನವಿಲ್ಲದೆ ಮುಕ್ತಿಯಿಲ್ಲ (ಋತೇ ಜ್ಞಾನಾನ್ನ ಮುಕ್ತಿಃ ನಹಿ ಜ್ಞಾನೇನ ವಿನಾ ಮುಕ್ತಿರ್ಲಭ್ಯತೇ) ಎನ್ನುವ ಮಾತು ಎಲ್ಲ ದರ್ಶನಗಳಲ್ಲಿಯೂ ಸತ್ಯವಾದುದು.

	ಮುಸುಕಿರುವ ಅವಿದ್ಯೆ ಜ್ಞಾನದಿಂದ ಹರಿದು ಆತ್ಮ ಸ್ವಪ್ರಕಾಶವಾಗುವುದೇ ಮುಕ್ತಿ ಎಂದು ವೇದಾಂತಿಗಳ ಮತ. ಇದು ತುರೀಯಾವಸ್ಥೆ ಮಾತು. ಜಾಗ್ರತ್, ಸ್ವಪ್ನ, ಸುಷುಪ್ತಿಗಳು ವ್ಯವಹಾರಿಕ ನೆಲೆಯಲ್ಲಿ ಸಿದ್ಧವಾದ ವ್ಯಾಪಾರಗಳು; ಅವಿದ್ಯೆಯ ಸನ್ನಿಕರ್ಷದಿಂದಾಗಿ ಪರಮಾರ್ಥನೆಲೆಯ ಅಥವಾ ತುರೀತಾವಸ್ತೆಯ ಜೀವಬ್ರಹ್ಮೈಕ್ಯ ಮರೆಯಾಗುತ್ತದೆ. ನಿದ್ರ್ವಂದ್ವವಾದ ನಿತ್ಯಾನಂದ. ಸ್ವತಂತ್ರವಾದ ಆತ್ಮವಸ್ತುವಿನಲ್ಲಿ ಅನ್ಯಥಾಭ್ರಮೆ ಉಂಟಾಗುತ್ತದೆ. ಈ ಭ್ರಮೆಯೇ ಸಂಸಾರದ ಮೂಲ; ಕನ್ನಡಿಯಲ್ಲಿ ನೋಡಿದ ನಗರಿಯಂತೆ ಸತ್ತ್ವವಿಲ್ಲದೆ ಕೇವಲ ಪ್ರಾತಿಭಾಸಿಕವಾದ ಈ ಸಂಸಾರಕ್ಕೆ ಆತ್ಮತತ್ತ್ವವೇ ಅಧಿಷ್ಠಾನ. ಈ ಅನ್ಯಥಾಜ್ಞಾನ ಹೋಯಿತೆಂದು ಮುಕ್ತಿಯೇ. ಒಂದು ನೆಲೆಯಲ್ಲಿ ಮುಕ್ತಿ ಎನ್ನುವುದು ಸಂಸಾರಕ್ಕೆ ಸಾಪೇಕ್ಷವಾದುದು. ಸಂಸಾರವೇ ಪರಮಾರ್ಥದಲ್ಲಿ ಇಲ್ಲ ಎಂದಾದಮೇಲೆ ಮುಕ್ತಿಯೂ ಇಲ್ಲ. ಅದಕ್ಕಾಗಿಯೇ ಶಂಕರಾಚಾರ್ಯರು ಸೂತ್ರಭಾಷ್ಯದಲ್ಲಿ ಸಂಸಾರೋ ಪರಮಾರ್ಥತಃ ನಾಸ್ತೀ ಅಸಕೃದವ್ಯೋ ಚಾಮಕುತ ಏವ ಮೋಕ್ಷಃ' ಎಂದು ಪ್ರಶ್ನಿಸಿದ್ದಾರೆ. ಆದರೆ ಮೋಕ್ಷಕ್ಕೆ ಮುಖ್ಯಲಕ್ಷಣವಾದ ಆನಂದ ಅವಿದ್ಯಾಂಧಕಾರ ತೊಲಗಿದ ಮೇಲೆ ಒದಗುವುದರಿಂದ ಮುಕ್ತಿಗೂ ಒಂದು ನೆಲೆಯುಂಟು. 'ಆನಂದಂ ಬ್ರಹ್ಮನೋ ವಿದ್ವಾನ್ ಎಂದು ಶ್ರುತಿಯಿದೆ. 'ಭೂಮಾ ಏವ ಸುಖಂ ನಾಲ್ಪೇ ಸುಖಮಸ್ತಿ ಎಂದಾಗ ಬ್ರಹ್ಮನೇ ಸುಖ, ಸಂಸಾರದಲ್ಲಿ ಸುಖವಿಲ್ಲ ಎನ್ನುವುದು ತಾತ್ಪರ್ಯ, ಬ್ರಹ್ಮಾನಂದವೇ ಮುಕ್ತಿ.

	ಅದ್ವೈತದಲ್ಲಿ 'ಜೀವೋ ಬ್ರಹ್ಮೈವ ನಾಪರಃ' ಎನ್ನುವ ಆಗ್ರಹವಿರುವುದರಿಂದ ಮುಕ್ತಿಯಲ್ಲಿ ಏಕಮೇವ ಪದಾರ್ಥದ ವ್ಯಾಪಾರವಿದೆ. ಸತ್, ಚಿತ್ ಆನಂದ ಈ ಲಕ್ಷಣಗಳನ್ನು ಒಳಗೊಂಡ ಆತ್ಮವಸ್ತುವೇ ಸಂಸಾರದಲ್ಲಿಯೂ ಮುಕ್ತಿಯಲ್ಲಿಯೂ ಇರುವುದು. ಆದರೆ ವಿಶಿಷ್ಟಾದ್ವೈತದ ಪ್ರಕಾರ ಮುಕ್ತಿಯಲ್ಲಿ ಈ ತಾದಾತ್ಮ್ಯ ಒದಗುವುದಿಲ್ಲ. ಕೇವಲ ಕಲ್ಯಾಣಗುಣಾಶ್ರಯವಾದ ಭಗವತ್ಸ್ವರೂಪಕ್ಕೂ ಭಗವಚ್ಛೇಷತ್ವ ಮತ್ತು ಭಗವದಾತ್ಮತ್ವಗಳನ್ನುಳ್ಳ ಜೀವಸ್ವರೂಪಕ್ಕೂ ಭೇದ ಸಾರ್ವಕಾಲಿಕವಾದುದು. ಮುಕ್ತಿಯಲ್ಲಿ ಕೂಡ ಅದು ಇಂಗುವುದಿಲ್ಲ. ಈ ದರ್ಶನದಲ್ಲಿ ಮುಕ್ತಿಗೆ ಕಾರಣವಾದುದು ಏಕಾಂತಿಕ ಮತ್ತು ಆತ್ಯಂತಿಕ ಭಕ್ತಿ. ಜ್ಞಾನದಿಂದಲೂ ಕರ್ಮದಿಂದಲೂ ಅಂತಃಕರಣ ಸುಸಂಸ್ಕøತವಾಗಿ ಭಕ್ತಿ ಸಾಧ್ಯವಾಗುತ್ತದೆ. ನಿರತಿಶಯಪ್ರೀತಿಯಾದ, ಅನನ್ಯಪ್ರಯೋಜನವಾದ, ಸ್ವೇತರವೈತೃಷ್ಣಾ ವಹವಾದ ಜ್ಞಾನವಿಶೇಷವೇ ಭಕ್ತಿ. ದ್ವೈತವೇದಾಂತದಲ್ಲಿ ಜ್ಞಾನವಿಲ್ಲದೆ ಮುಕ್ತಿ ಲಭಿಸದು ಎನ್ನುವ ನಿಲವನ್ನು ಒಪ್ಪಿಕೊಂಡಿದ್ದರೂ ಜ್ಞಾನ ಪರಮಾತ್ಮನ ಅನುಗ್ರಹ ವಿಲ್ಲದೆ ಲಭಿಸದು ಎಂದು ಕಲ್ಪನೆಯಿದೆ (ಅಜ್ಞಾನಿನಂ ಜ್ಞಾನದೋ ವಿಷ್ಣುಃ, ಜ್ಞಾನಿನಾಂ ಮೋಕ್ಷದಶ್ಚಸಃ). ಜ್ಷಾನಕ್ಕೆ ಪೂರ್ವಸಿದ್ಧತೆ ಭಕ್ತಿ. ಮಾಹಾತ್ಮ್ಯಜ್ಞಾನ ಪೂರ್ವಕವಾದ ಸುದೃಢಸ್ನೇಹವೆ ಭಕ್ತಿ. ಭಗವಂತನ ನಿರತಿರಯಾನಂತಾ ನವದ್ಯಕಲ್ಯಾಣಗುಣಗಳನ್ನು ಅರಿತು ಅವನಲ್ಲಿ ತೈಲಧಾರೆಯಂತೆ ಪ್ರೀತಿಯ ಪ್ರದಾಹ ಹರಿಸುವುದು ಭಕ್ತಿಯ ಮುಖ್ಯಲಕ್ಷಣ. ಇದೇ ಪರಮಾತ್ಮನ ಅನುಗ್ರಹ ಸಂಪಾದಿಸುತ್ತದೆ. ಇದರಿಂದ ಜ್ಞಾನ ಸಿದ್ಧಿಸುತ್ತದೆ, ಸಾರ್ಥಕವಾಗುತ್ತದೆ. ಈ ದರ್ಶನದ ಪ್ರಕಾರ ಪುರುಷನಾಮಕ ಪರಮಾತ್ಮನೂ ಮೂಲ ಪ್ರಕೃತಿಯಾದ ಲಕ್ಷ್ಮೀಯೂ ನಿತ್ಯಮುಕ್ತರು (ದ್ವಾವೇವ ನಿತ್ಯಮುಕ್ತಾತು ಪರಮಃ ಪ್ರಕೃತಿಸ್ತಥಾ-ಭಾಗವತತಾತ್ಪರ್ಯನಿರ್ಣಯ). ಉಳಿದ ಎಲ್ಲವೂ ಬದ್ಧ, ಅಸ್ವತಂತ್ರ, ಈ ತಾರತಮ್ಯ ಅರಿತು, ಬೇದಬುದ್ಧಿಯಿಂದ ಮಾಡುವ 'ಮಾಹಾತ್ಮ್ಯಜ್ಞಾನ ಪೂರ್ವಕ, ಸರ್ವತೋಧಿಕ ಪ್ರೇಮಪ್ರವಾಃ ರೂಪವಾದ ಭಕ್ತಿಯೇ ಪರಮಾತ್ಮನ ಸನ್ನಿಧಿಗೆ ಜೀವನವನ್ನು ಸೇರಿಸುತ್ತದೆ (ಭಕ್ತಿಃ ಏವ ಏನಂ ಗಮಯತಿ). ನೈಜ ಸುಖಾನುಭೂತಿ ಮುಕ್ತಿಯ ಲಕ್ಷಣ; ಅಮಲವಾದ ಭಕ್ತಿಯೇ ಅದಕ್ಕೆ ಸಾಧನ (ಮುಕ್ತಿರ್ನೈಜಸುಖಾನುಭೂತಿ ಃ ಅಮಲಾ ಭಕ್ತಿಶ್ಚ ತತ್ಸಾಧನಂ). ಭಗವದ್ಭಕ್ತಿ ಅತ್ಯರ್ಥಹೇತುವೆಂದು ಈ ದರ್ಶನದ ನಿಲವು.

	ಶ್ರೀಕಂಠಶಿವಾಚಾರ್ಯರ ಶಿವಾದ್ವೈತದರ್ಶನದಲ್ಲಿ ಜೀವ ಅನಾದಿಯಾದ ಅವಿದ್ಯಾವಾಸನದಿಂದ ಬಳಲುತ್ತಿರುವಾಗಲೂ ಪರಮೇಶ್ವರಾಂಶ ಅವನಲ್ಲಿ ಇರುತ್ತದೆ-ಕಟ್ಟಿಗೆಯಲ್ಲಿ ಬೆಂತಿ ಅಡಗಿರುವಂತೆ. ಕಾಮನಿಷಿದ್ಧಕರ್ಮಗಳನ್ನು ಬಿಟ್ಟು ನಿಯತಕರ್ಮಗಳನ್ನು ಮಾಡಿದರೆ ಚಿತ್ತಶುದ್ಧಿ ಒದಗುತ್ತದೆ. ಇದರಿಂದ ಭಕ್ತಿ, ಭಕ್ತಿಯಿಂದ ಉಪಾಸನೆ, ಉಪಾಸನೆಯಿಂದ ಮುಕ್ತಿ. ಈ ಮಾರ್ಗವಲ್ಲದೆ ಈ ದರ್ಶನದಲ್ಲಿ ಮತ್ತೊಂದು ದಾರಿಯನ್ನು ಹೇಳಲಾಗಿದೆ. ವೇದಾಂತ ವಾಕ್ಯಜನ್ಯವಾದ ಜ್ಞಾನ ಪರೋಕ್ಷವಾದುದು, ಅದನ್ನು ಉಪಾಸನೆಯಿಂದ ಬೆಳಗಿದರೆ ಅದು ಧ್ಯಾನವಾಗುತ್ತದೆ. ಉಪಾಸನಾರೂಪಕವಾದ ಜ್ಞಾನವೇ ಧ್ಯಾನ. ಇದು ಸಾಕ್ಷಾತ್ಕಾರ ಉಂಟುಮಾಡತಕ್ಕದ್ದು; ಸಾಕ್ಷಾತ್ಕಾರವೇ ಮೋಕ್ಷಕ್ಕೆ ಕಾರಣ. ಮುಕ್ತಿಯನ್ನು ಈ ದರ್ಶನ 'ನಿಷ್ಕಳಂಕ ಶಿವತ್ವ ಪ್ರಾಪ್ತಿ ಎಂದು ನಿರ್ದೇಶಿಸಿದ್ದಾರೆ. ಮುಕ್ತಿಯಲ್ಲಿ ಜೀವನಿಗೆ ತನ್ನ ಸಹಜಸ್ವರೂಪಾವಿರ್ಭಾವ ಒದಗುತ್ತದೆ. ಮುಕ್ತನಾದವ ಸ್ವಾಭಾವಿಕವಾಗಿಯೇ ಚಿದಾನಂದಘನವಾಗುತ್ತಾನೆ. ಸರ್ವಜ್ಞತ್ವ ಮೊದಲಾದ ವಿಶಿಷ್ಟಗುಣಗಳಿಂದ ಕೂಡಿದ ಸ್ವರೂಪ ಬರುತ್ತದೆ. ಬ್ರಹ್ಮನಿಗೂ ಮುಕ್ತನಿಗೂ ಸರ್ವಕಾಮಾವಾಪ್ತಿಯ ಲಕ್ಷಣ ಉಂಟು. ಅವನ ಶಕ್ತಿ ಸಂಕುಚಿತವಾಗಿರುವುದಿಲ್ಲ. ಭೇದಾಬೇದವಾದಿಗಳು ಜೀವನ ಅಣು. ಬ್ರಹ್ಮನ ಒಂದು ಅಂಶ ಎಂದು ಬ್ರಹ್ಮನಿಂದ ಜೀವ ಭಿನ್ನಭಿನ್ನವಾಗಿರುತ್ತದೆ. ಎಂದು ಹೇಳುತ್ತಾರೆ. ನಿರ್ವಿಕಾರನೂ ಜಗತ್ಕಾರಣನೂ ಆದ ಬ್ರಹ್ಮನನ್ನು 'ಅಹಂ ಬ್ರಹ್ಮಾಸ್ಮಿ ಎಂದು ಧ್ಯಾನಮಾಡಿದರೆ ಜೀವದ ದೇಹಾತ್ಮಭಾವ ಹೋಗಿ ಬ್ರಹ್ಮಭಾವ ಒದಗುತ್ತದೆ. ಬ್ರಹ್ಮಭಾವದಿಂದ ಮುಕ್ತಿ ಲಭಿಸುತ್ತದೆ. ಮುಕ್ತಿಯಲ್ಲಿ ಜೀವ ಬ್ರಹ್ಮನೊಂದಿಗೆ ಅಭಿನ್ನವಾಗಿ ಸೇರಿಹೋಗುತ್ತನೆ. ಮುಕ್ತಿಯಲ್ಲಿ ಮಾತ್ರ ಅಭೇದವನ್ನೂ ಈ ದರ್ಶನ ಹೇಳುತ್ತದೆ. ವಲ್ಲಭಾಚಾರ್ಯರ ಶುದ್ಧಾದ್ವೈತದಲ್ಲಿ ಬ್ರಹ್ಮ ನಿರ್ಗುಣನೂ ಹೌದು, ಸಗುಣನೂ ಹೌದು, ಅಕರ್ತನೂ ಹೌದು, ಸರ್ವಕರ್ತನೂ ಹೌದು, ಅಣುವೂ ಹೌದು, ಮಹತ್ತೂ ಹೌದು. ಇಲ್ಲಿ ಬ್ರಹ್ಮನನ್ನು ಶ್ರೀಕೃಷ್ಣನೆಂದು ನಿರ್ದೇಶಿಸಲಾಗಿದೆ. ಯಶೋದೆಯ ಮಗನೇ ಪರಮತತ್ತ್ವ; ಇದು ಸಾಕಾರ ಪರಬ್ರಹ್ಮ. ಭಗವಂತನ ಅನುಗ್ರಹವೇ ಭಕ್ತಿಗೆ ಮೂಲಕಾರಣ; ಈ ಅನುಗ್ರಹವೇ ಜೀವವನ್ನು ಪೋಷಿಸುವುದು. ಈ ಪೋಷಣವೇ (ಪುಷ್ಟಿಯೇ) ಮುಕ್ತಿಗೆ ಸಾಧನ. ಎಲ್ಲವೂ ಕೃಷ್ಣಮಯವೇ (ಸರ್ವಖಲ್ವಿದಂ ಬ್ರಹ್ಮ) ಎನ್ನುವುದನ್ನು ಸಿದ್ಧಿಸಿಕೊಂಡರೆ ಅದೇ ಮುಕ್ತಿ. ಕರ್ಮಕ್ಷಯವಾಗಿ ಶರೀರಪಾತವಾದಾಗ ಮುಕ್ತನಾದವ ಗೋಲೋಕದಲ್ಲಿ ಕೃಷ್ಣಸಾಯುಜ್ಯ ಪಡೆಯುತ್ತಾನೆ. ನಿಂಬಾರ್ಕರ ದರ್ಶನದಲ್ಲಿ ಬ್ರಹ್ಮನಿಗೆ ಮೂರು ರೂಪಗಳು: ಈಶ್ವರ, ಪ್ರಕೃತಿ, ಪುರುಷ ಎಂದು. ಜಗತ್ತು ಬ್ರಹ್ಮ ಪರಿಣಾಮವೇ, ಬ್ರಹ್ಮನಿಂದ ಅಭಿನ್ನವೇ . ಬ್ರಹ್ಮ ತನ್ನ ಸ್ವರೂಪದಲ್ಲಿ ನಿರ್ವಿಕಾರ, ಜಗತ್ತನ್ನು ಸೃಷ್ಟಿಮಾಡುವಾಗ ಮಾತ್ರ ಅವನು ಸಗುಣ. ಜಗತ್ತು, ಬ್ರಹ್ಮೆರಡೂ ಭೇದಾಭೇದಸಂಬಂಧದಲ್ಲಿ ನಿಂತವೂ. ಕೃಷ್ಣನಲ್ಲಿ ಭಕ್ತಿಮಾಡಿದರೆ ಮುಕ್ತಿ ದೊರೆಯುತ್ತದೆ; ಈ ಮುಕ್ತಿಯಲ್ಲಿ ಜೀವ ತನ್ನ ಬ್ರಹ್ಮಭಾವವನ್ನು ಪಡೆದು ಬ್ರಹ್ಮನಿಂದ ಅಭಿನ್ನನಾಗಿ ವಿಹರಿಸುತ್ತಾನೆ. ಬಲದೇವ ಜೀವನನ್ನು ಬ್ರಹ್ಮನ ಶಕ್ತಿ, ಶರೀರ ಎಂದು ಪರಿಗಣಿಸಿ ಗುಣ-ಗುಣೀಭಾವದಿಂದ ಜೀವಬ್ರಹ್ಮರು ಭಿನ್ನಾಭಿನ್ನರು ಎಂದಿದ್ದಾನೆ. ಮುಕ್ತಿಗೆ ಭಗವಂತನ ಅನುಗ್ರಹವೇ ಮುಖ್ಯಸಾಧನೆ. ಮುಕ್ತಿಯಲ್ಲಿ ಕೂಡ ಜೀವ ಬ್ರಹ್ಮನೊಂದಿಗೆ ಬೆರೆಯುವುದಿಲ್ಲ ಭಿನ್ನವಾಗಿಯೇ ಉಳಿಯುತ್ತಾನೆ. ಆದರೆ ಭಗವಂತನ ಸಾನಿಧ್ಯದಲ್ಲಿ ಪರಮಾನಂದವನ್ನು ಅನುಭವಿಸುವುದೇ ಮುಕ್ತಿಯರಸ ಎಂದು ಬಲದೇವನವಾದ.

	ನೈಯಾಯಿಕರು ಬಾಳೆಲ್ಲವೂ ದುಃಖಮಯವೆಂದು ಹೇಳಿ ದುಃಖದ ಆತ್ಯಂತಿಕ ವಿವೋಕ್ಷವೇ ಅಪವರ್ಗವೆನ್ನುತ್ತಾರೆ. ಅಪದರ್ಗವೆಂದರೆ ಮುಕ್ತಿಯೇ. ಇದೇ ನಿಃಶ್ರೇಯಸ ವನಿಸಿಕೊಳ್ಳುತ್ತದೆ. ಈ ಜನ್ಮ ದಾಟಿದರೆ ಮುಂದೆ ಜನ್ಮ ಬಾರ ದಿರುವುದೇ ಮುಕ್ತಿ. ಪುನರ್ ಜನ್ಮಭಯದಿಂದ ದೂರವಾದ ಇದನ್ನೇ ಅವರು ಅಮೃತತ್ವವೆಂದೂ ವ್ಯವಹರಿಸುತ್ತಾರೆ. ಸಂಸಾರದಿಂದ ಪಾರಾಗುವುದೇ ಮುಕ್ತಿಯೆಂದು ವಾದಿಸುವ ನೈಯಾಯಿಕರು ಅದೇ ಬ್ರಹ್ಮನೆಂದೂ ಬಗೆಯುತ್ತಾರೆ. ಸಂಸಾರಕ್ಕೆ ಕಾರಣವೆಂದರೆ ತೃಷ್ಣೆ; ಅದಕ್ಕೆ ಕಾರಣ ಮಿಥ್ಯಾಜ್ಞಾನ. ಮಿಥ್ಯಾಜ್ಞಾನ ನಾಶವಾದರೇನೇ ಮುಕ್ತಿ ಲಭಿಸುವುದು. ಮಿಥ್ಯಾಜ್ಞಾನಕ್ಕೆ ವಿರುದ್ಧವಾಗಿರುವುದು ತತ್ತ್ವಜ್ಞಾನ; ಇದಕ್ಕೆ ಯೋಗ, ಸತ್ಸಂಗ, ಪ್ರತಿಭೆ ಇವು ನೆರವಾಗುತ್ತವೆ. ಅಂತೂ ತತ್ತ್ವಜ್ಞಾನದಿಂದ ಒದಗುವ ಮುಕ್ತಿ ಸುಷುಪ್ತಿಯಂತೆ ಇರುವ ಸ್ಥಿತಿ. ಇದರಲ್ಲಿ ಸುಖದುಃಖಗಳಿಲ್ಲ, ವಿಶಿಷ್ಟವಾದ ಅನುಭವಗಳಿಲ್ಲ, ರಾಗದ್ವೇಷಾದಿಗಳಿಲ್ಲ, ಪ್ರವೃತ್ತಿಗಳಿಲ್ಲ, ಕರ್ಮಾನುಶಯಗಳಿಲ್ಲ. ವೈಶೇಷಿಕರ ಪ್ರಕಾರ ಬುದ್ಧಿ, ಸುಖ, ದುಃಖ ಮೊದಲಾದ ಗುಣಗಳಿರುವ ನಿತ್ಯದ್ರವ್ಯವಾದ ಆತ್ಮ ಸುಖದುಃಖವ್ಯವಸ್ಥೆಯಲ್ಲಿ ಸಿಕ್ಕಿಕೊಂಡು ಸಂಸಾರಿಯಾಗುತ್ತದೆ; ದುಃಖದ ಆತ್ಯಂತಿಕ ವಿನಾಶವೇ ಮುಕ್ತಿ. ಮುಕ್ತಿಯಲ್ಲಿ ಜೀವನಿಗೆ ಯಾವ ಗುಣಗಳೂ ಇರುವುದಿಲ್ಲ. ಈ ಗುಣರಾಗಿತ್ಯವೇ ಮುಕ್ತಿಯ ತಾತ್ಪರ್ಯ. ಬೆಂದುಹೋದ ಕಟ್ಟಿಗೆಯಿಂದ ಬೆಂಕಿ ಹೇಗೆ ಬರದೆ ಉಪಶಮವಾಗುವುದೋ ಹಾಗೆಯೇ ಆತ್ಮ ಉಪಶಮನವಾಗಿ ಮುಕ್ತಿ ಸಿದ್ಧಿಸುತ್ತದೆ ಎಂದು ವೈಶೇಷಿಕರ ನಿಲವು.

	ಪೂರ್ವಮೀಮಾಂಸದಲ್ಲಿಯೂ ಮುಕ್ತಿಯ ಮಾತು ಬರುತ್ತದೆ. ಆದರೆ ಜೈಮಿನಿಯ ಪ್ರಕಾರ ಕರ್ಮಗಳೇ ಪರಮಪುರುಷಾರ್ಥಕ್ಕೆ ಕಾರಣ. ಜ್ಞಾನವಲ್ಲ. ಇದೇ ಉತ್ತರಮೀಮಾಂಸಕ್ಕೂ ಪೂರ್ವಮೀಮಾಂಸಕ್ಕೂ ಇರುವ ಮುಖ್ಯ ಭೇದ. 

	ಇಪ್ಪತ್ತೈದು ತತ್ತ್ವಗಳನ್ನು ನಿರ್ದೇಶಿಸುವ ಸಾಂಖ್ಯರು ಮೂರು ಬಗೆಯ ಮೋಕ್ಷಗಳನ್ನು ಹೇಳುತ್ತಾರೆ. ಜ್ಞಾನದ ಪರಾಕಾಷ್ಠದಿಂದ ಒದಗುವ ಮೋಕ್ಷ. ಇಂದ್ರಿಯಗಳ ಉಪಶಮನದಿಂದ ಉಂಟಾಗುವ ಮೋಕ್ಷ ಮತ್ತು ಇವೆರಡೂ ಆಗಿ ಒದಗುವ ಮೋಕ್ಷ ಮೊದಲ ಎರಡರಿಂದ ಪಾಪ, ಪುಣ್ಯ, ಧರ್ಮಾಧರ್ಮ ಇವುಗಳ ದ್ವಂದ್ವಾನುಭವ ಅಳಿದು, ಅದರಿಂದಾಗಿ ಸಂಸಾರದಿಂದ ದೂರವಾಗಿ ಪುರುಷ ಆನಂದ ಅನುಭವಿಸುವುದು ಸಾಧ್ಯವಾಗುತ್ತದೆ. ಮುಕ್ತಿಯಲ್ಲಿ ಪುರುಷ ಸ್ವಾತ್ಮಾರಾಮನಾಗಿರುತ್ತಾನೆ. ಆಧಿಭೌತಿಕ, ಆಧ್ಯಾತ್ಮಿಕ, ಆಧಿದೈವಿಕ ಎಂಬ ಮೂರು ದುಃಖಗಳೇ (ತಾಪತ್ರಯ) ಸಂಸಾರದ ಮುಖ್ಯಲಕ್ಷಣ ಎಂದೂ ಈ ತಾಪತ್ರಯದ ಪರಿಹಾರವೇ ಮುಕ್ತಿಯೆಂದೂ ಈ ದರ್ಶನದ ನಿಲವು. ಸಾಂಖ್ಯ ಎನ್ನುವ ಮಾತಿಗೆ ಮುಕ್ತಿಯನ್ನು (ಸಾಂಖ್ಯವನ್ನು) ಹೇಳುವ ಶಾಸ್ತ್ರವೆಂದೇ ಅರ್ಥ. ಪಂಗು ಮತ್ತು ಅಂಧ ಇವರ ಸಂಯೋಗ ವಿಶೇಷ ನ್ಯಾಯದಂತೆ ಪ್ರಕೃತಿಯೂ ಪುರುಷನೂ ಒಡಗೂಡಿ ನಡೆದಾಗಲೇ ಜಗದ್ವ್ಯಾಪಾರ ಸಿದ್ಧವಾಗುತ್ತದೆ, ತ್ರೈಗುಣ್ಯವಾಗುತ್ತದೆ, ಅದರಲ್ಲಿ ಪರಿಣಾಮ ಅಥವಾ ಸಂಕರ ವ್ಯಕ್ತವಾಗುತ್ತದೆ, ಅವಿದ್ಯೆ ಒದಗುತ್ತದೆ. ಮುಕ್ತಿಯಲ್ಲಿ ಪುರುಷ ಪ್ರಕೃತಿಯಸಂಸರ್ಗದಿಂದ ಹೊರಬಂದು ತನ್ನ ಚಿನ್ಮಾತ್ರ ಸ್ಥಿತಿಯಲ್ಲಿದ್ದುಕೊಂಡು, ಜಗದ್ವ್ಯಾಪಾರ ವಿಮುಖನಾಗಿ ಆನಂದ ಅನುಭವಿಸುತ್ತಾನೆ. ಪುರುಷ 'ಜ್ಞ; ತಾನು ಅಕರ್ತ, ಕರ್ಮವೆಲ್ಲವೂ ಪ್ರಕೃತಿಯಲ್ಲಿ, ಪ್ರಕೃತಿಗಿಂತ ತಾನು ಭಿನ್ನ ಎನ್ನವ ವಿವೇಕ ಉಂಟಾಗುವುದು ಮುಕ್ತಿಯಲ್ಲಿ, ಈ ಪ್ರಕೃತಿ ವಿಯೋಗದಿಂದ ಪುರುಷನಿಗೆ ಕೈವಲ್ಯ (ಒಂಟಿತನ) ಸಿದ್ಧಿಸುತ್ತದೆ. ಪುರುಷ ಕೇವಲ, ಅವನ ಸ್ವರೂಪ ನಿರ್ಗುಣ ಎನ್ನವ ಸಮ್ಯಕ್‍ಖ್ಯಾತಿಯಿಂದ (ಸರಿಯಾದ ಜ್ಞಾನ) ಪುನರ್ಜನ್ಮ ತಪ್ಪುತ್ತದೆ. ಎಂದರೆ ಪುರುಷನಿಗೆ ಬಂಧ, ಮುಕ್ತಿ ಎನ್ನುವುದು ಸಲ್ಲದು; ಪುರುಷನೇನೋ ನಿತ್ಯ ಮುಕ್ತನೇ. ಪ್ರಕೃತಿಸಂಸರ್ಗದಿಂದ ಅವನು ಬದ್ಧನಾದಂತೆ ತೋರುತ್ತಾನೆ ಅಷ್ಟೆ. ಪ್ರಕೃತಿಯಿಂದ ಪುರುಷನಿಗೆ ಬಂಧವಾದಂತೆ ಮುಕ್ತಿಯೂ ಒದಗುತ್ತದೆ. ಸೃಷ್ಟಿ ಪುರುಷನಿಹೆ ಭೋಗಾರ್ಥವೂ ಹೌದು, ಕೈವಲ್ಯಾರ್ಥವೂ ಹೌದು. ಪುರುಷ ನಿತ್ಯನಿರ್ವಿಕಾರ ಎಂದು ತಿಳಿದೊಡನೆ ಪುರುಷನಿಗೆ ಬಂಧವೂ ಇಲ್ಲ. ಮುಕ್ತಿಯೂ ಇಲ್ಲ. ಯೋಗದರ್ಶನ ಸಾಂಖ್ಯತತ್ತ್ವದ ಆಸರೆಯನ್ನೇ ಹಿಡಿದು ಕೈವಲ್ಯವನ್ನು ಉಲ್ಲೇಖಿಸುತ್ತದೆ, ವಿವೇಕವೇ ಕೈವಲ್ಯದ ಸಾಧನವೆಂದು ಸಮ್ಮತಿಸುತ್ತದೆ. 'ಚಿತ್ತವೃತ್ತಿಗಳ ಆತ್ಯಂತಿಕನಿರೋಧವನ್ನು ಸಮಾಧಿಯೆಂದು ಹೇಳಿ ಯೋಗದರ್ಶನ ಇದೇ ಪರಮಪುರುಷಾರ್ಥ ಎನ್ನುತ್ತದೆ. ಶುದ್ಧ ಸಂವಿದ್ರೂಪನಾದ ಪುರುಷ ಬುದ್ಧಿಯ ಸಂಯೋಗದಿಂದ ಬದ್ಧನಾಗಿ ದುಃಖವನ್ನು ಅನುಭವಿಸುತ್ತಾನೆ; ದುಃಖ ಹೇಯವಾದುದು; ಸಮಾಧಿ ಅಥವಾ ಮುಕ್ತಿ, ಹಾನ. ಸತ್ತ್ವ-ಬಿದ್ಧಿ ಎರಡರ ಸಂಯೋಗವೇ ಸಂಸಾರ, ದುಃಖಹೇತು. ಸಂಸಾರವನ್ನು ತೊಲಗಿಸಿ ಸಮಾದಿ üಅನುಭವಿಸುವ ಉಪಾಯ (ಹಾನೋಪಾಯ) ಯೋಗ ಎನಿಸಿಕೊಳ್ಳುತ್ತದೆ. ಪುರುಷ, ಪ್ರಕೃತಿ ಇವರ ವಿಯೋಗವೇ ಯೋಗವೆಂದು ನಿರ್ದೇಶನವಿದೆ. ಆತ್ಮಾನಾತ್ಮವಿವೇಕ ಎಂದು ವೇದಾಂತಿಗಳು ಹೇಳುವಂತೆ ಪುರುಷ ಪ್ರಕೃತಿ ವಿವೇಕ. ಚಿತ್ತವೃತ್ತಿಗಳಿಂದ ಪ್ರಪಂಚವೆಂದೂ ಅಭ್ಯಾಸ ಮತ್ತು ವೈರಾಗ್ಯಗಳಿಂದ ಇದನ್ನು ನಿರೋಧಿಸಿದರೆ ದೊರೆಯುವುದು ಕೈವಲ್ಯವೆಂದೂ ಪತಂಜಲಿಯ ಮತ. ಈ ಕೈವಲ್ಯಸ್ಥಿತಿಯಲ್ಲಿ ಪುರುಷ ತನ್ನ ಸ್ವರೂಪದಲ್ಲಿ ಪ್ರತಿಷ್ಠಿತನಾಗಿರುತ್ತಾನೆ. ಆಗ ಅವನು ಚಿನ್ಮಾತ್ರ. ಚಿತ್ತೇ ಅವನ ಶಕ್ತಿ. ವೃತ್ತಿ ಸಾರೂಪ್ಯ ಇರುವುದಿಲ್ಲ. ಯೋಗದರ್ಶನದಲ್ಲಿ ಜೀವನ್ಮುಕ್ತಿಗೆ ಸ್ಥಾನವುಂಟು. ಬದುಕಿರುವಾಗ ಸತತಸಮಾಧಿ ಅಥವಾ ನಿತ್ಯವಿವೇಕ ಸಾಧ್ಯವಿಲ್ಲ. ಅವಿದ್ಯಾದಿಗಳು ಕರಗಿ, ಚಿತ್ತನಿರೋಧವನ್ನು ಅಭ್ಯಾಸಮಾಡಿದಾಗ ಮರಣಾನಂತರ ಚಿತ್ತ ಸಂಪೂರ್ಣವಾಗಿ ಮರೆಯಾಗುತ್ತದೆ. ಆಗಲೇ ನಿರಂತರ ಕೈವಲ್ಯ. ಸಮಾಧಿಗೆ ಈಶ್ವರಪ್ರಣೆಧಾನ ಒಂದು ಉಪಾಯವೆಂದು ಪತಂಜಲಿ ತನ್ನ ಯೋಗಸೂತ್ರದಲ್ಲಿ. ಹೇಳಿದ್ದಾನೆ. ಈಶ್ವರಪ್ರಣೆಧಾನದಿಂದ ವಿವೇಕಜ್ಞಾನ ಲಭಿಸುವುದಲ್ಲದೆ ಯೋಗಕ್ಕೆ ಅಂತರಾಯಗಳೂ ಅಳಿಯುತ್ತವೆ. ಆದರೆ ಇಲ್ಲಿ ಭಗವಂತನ ಅನುಗ್ರಹ, ಭಕ್ತಿ ಎನ್ನುವ ಪ್ರಕ್ರಿಯೆಗಳು ಕಾಣಬರುವುದಿಲ್ಲ.

	ಮೀಮಾಂಸಕರ ಪ್ರಕಾರ ಆತ್ಮ ಕರ್ತ ಮತ್ತು ಭೋಕ್ತ; ಚೈತನ್ಯ ವಿಶಿಷ್ಟವಾದ ಆತ್ಮ ದೇಹೇಂದ್ರಿಯ ವಿಷಯಗಳಲ್ಲಿ ಬದ್ಧನಾಗಿರುವುದೇ ಸಂಸಾರ ಎನಿಸಿಕೊಳ್ಳುತ್ತದೆ. ಇದರಿಂದಾಗಿ ಸುಖದುಃಖವೇ ಮೊದಲಾದ ಪ್ರಾಪಂಚಿಕ ಅನುಭವಗಳನ್ನು ಪಡೆಯುತ್ತಾನೆ. ದೇಹ, ಇಂದ್ರಿಯ, ವಿಷಯ ಈ ಮೂರು ಬಂಧಗಳು ಕಳಚಿಬಿದ್ದರೆ ಆತ್ಮನಿಗೆ ಪ್ರಪಂಚದ ಸಂಬಂಧ ತಪ್ಪುತ್ತದೆ. ಹೀಗೆ ಮೂರು ಬಂಧಗಳು ಆತ್ಯಂತಿಕವಾಗಿ ನಾಶ ಹೊಂದುವುದೇ ಮುಕ್ತಿ. ಮೀಮಾಂಸಕರು ಧರ್ಮ ಧರ್ಮಗಳ ಪರಿಗಣನೆಮಾಡಿ ಧರ್ಮದಿಂದ ಐಹಿಕ ಹಾಗೂ ಪಾರಲೌಕಿಕ ಸುಖಲಭಿಸುವುದೆಂದೂ ಆತ್ಮನನ್ನು ಕುರುತು ತತ್ತ್ವಜ್ಞಾನ ಒದಗುವುದೆಂದೂ ಹೇಳುತ್ತಾರೆ. ನಿತ್ಯಕರ್ಮಗಳನ್ನು ಮಾಡುತ್ತ ಪ್ರಾರಬ್ಧಗಳನ್ನು ಅನುಭವಿಸಿ ಇವು ಮುಗಿದೊಡನೆ ಆತ್ಮ ಮುಕ್ತಿ ಹೊಂದುತ್ತದೆ. ಈ ದೇಹ ಬಿದ್ದುಹೋದ ಬಳಿಕ ಮತ್ತೊಂದು ದೇಹದೊಂದಿಗೆ ಸಂಬಂಧ ಬಾರದಿರುವುದೇ ಮುಕ್ತಿಯೆಂದು ಮೀಮಾಂಸಕರ ನಿಲವೂ ಇವರು ಜ್ಞಾನದ ಆಧಿಕ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಭೂಮಿಯ ಮೇಲಾಗಲಿ ಸ್ವರ್ಗದಲ್ಲಾಗಲಿ ಯಾವ ಫಲಾಪೇಕ್ಷೆ ಇಲ್ಲದೆ ಮಾಡುವ ನಿಷ್ಕಾಮಕರ್ಮದಿಂದಲೇ ಮುಕ್ತಿ ಒದಗುವುದೆಂದು ಇವರ ವಾದ.

	ದೇಹಾತ್ಮವಾದಿಗಳಾದ ಲೋಕಾಯತರ ಪ್ರಕಾರ ಶರೀರಪಾತವೇ ಮುಕ್ತಿ. ಸುಖದುಃಖಗಳೆಲ್ಲ ದೇಹಸಂಬಂಧ ಅನುಭವಗಳೇ ಆಗಿರುವುದರಿಂದ ಮುಕ್ತಿ ಸುಖ ಎನ್ನುವುದು ಇರದು. ಜನ್ಮಾಂತರಗಳಿಗೆ ಉತ್ಕ್ರಮಣ ಮಾಡುವ ಸತ್ತ್ವವನ್ನು ಅವರು ಒಪ್ಪಿಕೊಳ್ಳದೆ ಇರುವುದರಿಂದ ಅವರ ಮುಕ್ತಿಯೂ ಕೇವಲ ಪ್ರಾಪಂಚಿಕವಾದದ್ದು. 

	ಅವೈದಿಕದರ್ಶನಗಳಾದ ಜೈನ, ಬೌದ್ಧ ಎರಡೂ ಪಂಥಗಳು ಸಾಂಖ್ಯ, ವೇದಾಂತ, ನ್ಯಾಯ, ದರ್ಶನಗಳಿಂದ ಮುಕ್ತಿಯ ಕಲ್ಪನೆಯನ್ನು ಪಡೆದುಕೊಂಡಿರುವುದು ಸ್ಪಷ್ಟವಾಗಿದೆ. ಜೈನರ ಪ್ರಕಾರ ಜೇವನಲ್ಲಿ ಕರ್ಮ ಆವರಿಸಿಕೊಳ್ಳುತ್ತದೆ. ದುಃಖ ಒದಗುತ್ತದೆ. ಜೀವ ಸಂಸಾರಿಯಾಗುತ್ತಾನೆ. ಇದು ಭವಬಂಧ. ಆಸ್ರವ ಹೀಗೆ ಭವ ಹೇತುವಾದರೆ, ಸಂವರ ಮೋಕ್ಷಕ್ಕೆ ಕಾರಣವಾಗುತ್ತದೆ. ಸಂವವೆಂದರೆ ಮನೋವಾಕ್ಕಾಯಗಳನ್ನು ಕಾಪಾಡಿಕೊಳ್ಳುವುದು, ಗುಪ್ತಿ, ಸಂಯಮ. ಇದರಿಂದ ಜನ್ಮಾಂತರ ಸಚಿತವಾದ ಕರ್ಮಗಳೆಲ್ಲ ಕಳಚಿಬೀಳುತ್ತವೆ, ಇದು ನಿರ್ಜರ. ಎಲ್ಲ ಕರ್ಮಗಳೂ ಕ್ಷಯಿಸಿಹೋದರೆ ಅದು ಮುಕ್ತಿ ಅಥವಾ ಮೋಕ್ಷ. ಜೈನರಲ್ಲಿ ಇರುವ ಸಪ್ತ ಪದಾರ್ಥಗಳ ಪ್ರಕ್ರಿಯೆಯಲ್ಲಿ ಮೋಕ್ಷ ಒಂದು (ಜೀವ, ಅಜೀವ, ಆಸ್ರವ ಬಂಧ, ಸಂವರ, ನಿರ್ಜರ ಇವು ಉಳಿದ ಆರು). ಮೋಕ್ಷದಲ್ಲಿ ಜೀವ ತನ್ನ ಮಲಲಿಪ್ತವಲ್ಲದ ಶುದ್ಧಸ್ವರೂಪ ಪಡೆದು ಬದ್ಧಾವಸ್ಥೆಯಿಂದ ಮುಕ್ತನಾಗುತ್ತಾನೆ. ಎಲ್ಲ ದುಃಖಗಳೂ ಮರೆಯಾಗಿ ಅನಂತ ಮತ್ತು ಅಮಿಶ್ರಿತ ಸುಖ ಅನುಭವಿಸುತ್ತಾನೆ. ಇದೇ ಜೀವನ ನಿಜಸ್ವರೂಪವಾದುದರಿಂದ ಈ ಸ್ಥಿತಿಯನ್ನು ಕೈವಲ್ಯವೆಂದೂ ಈ ಸ್ಥಿತಿಯಲ್ಲಿರುವ ಜೀವನನ್ನು ಕೇವಲಿಯೆಂದೂ ವ್ಯವಹರಿಸುತ್ತಾರೆ. ಕೇವಲಿಯಾದ ಜೀವನಿಗೆ ಅನಂತಚತುಷ್ಟಯದ ಅನುಭವವುಂಟು. ಅನಂತಜ್ಞಾನ, ಅನಂತವಿರ್ಯ, ಅನಂತಶ್ರದ್ಧೆ, ಮತ್ತು ಅನಂತ ಶಾಂತಿ ಇವು ಅನಂತ ಚತುಷ್ಟಯ. ಜೀವ ಈ ಸ್ಥಿತಿಯಲ್ಲಿ ಅನಂತಸುಖ ಅನುಭವಿಸುತ್ತ ಉಜ್ಜಲವಾಗಿ ಇರುತ್ತದೆ. ಇದರಿಂದ ಇತರ ಜೀವಿಗಳಿಗೆ ಮಂಗಳ ತಂದು ಕೊಡುವ ಶಕ್ತಿ ಬರುತ್ತದೆ. ಜೈನರ ಪ್ರಕಾರ ಸಮ್ಯಕ್‍ದರ್ಶನ, ಸಮ್ಯಕ್‍ಚಾರಿತ್ರ್ಯ ಇವು ಮೂರೂ ಮೋಕ್ಷ ಮಾರ್ಗಗಳು. ಅನಾದಿಕಾಲದಿಂದ ಜೈನತೀರ್ಥಂಕರರು ಕಂಡುಕೊಂಡು ತಿಳಿಯಹೇಳಿದ ತತ್ತ್ವಾರ್ಥವನ್ನು ಶ್ರದ್ಧೆಯಿಂದ ಅಧಿಗಮ ಮಾಡಿಕೊಳ್ಳುವುದಕ್ಕೆ ಸಮ್ಯಗ್ದರ್ಶನವೆಂದು ಹೆಸರು. ಜಿನ ವಚನಗಳಲ್ಲಿಯೂ ಜೈನಾಗಮಗಳಲ್ಲಿಯೂ ಹೇಳಲ್ಪಡುವ ತತ್ತ್ವಗಳನ್ನು ನಿಶ್ಚಯವಾಗಿ ತಿಳಿಯುವುದು ಸಮ್ಯಕ್‍ಜ್ಞಾನ ಎನಿಸಿಕೊಳ್ಳುತ್ತದೆ. ಇದರಿಂದ ವಸ್ತುವಿನ ವಿಚಾರವಾಗಿ ಪಾಕ್ಷಿಕಬುದ್ಧಿ ಹೋಗಿ ಸಮಗ್ರಜ್ಞಾನ ಒದಗುತ್ತದೆ. ಮುಕ್ತನಾದವನಿಗೆ ಪರಿ ಪೂರ್ಣಜ್ಞಾನ ಇರುತ್ತದೆ. ಈ ನೆಲೆಯಲ್ಲಿಯೇ ಜೈನರು ನಯವಾದವನ್ನೂ ಸ್ಯಾದ್ವಾದವನ್ನೂ ಹೇಳಿದ್ದಾರೆ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಐದು ಪಂಚವ್ರತಗಳು: ಇವನ್ನು ಅನುಸರಿಸಿ ಶೀಲ ಶುದ್ಧವಾದರೆ ಅದು ಸಮ್ಯಕಾಚರಿತ್ರ, ಈ ಮೂರೂ ಮುಕ್ತಿಗೆ ಸಾಧನೆಗಳು ಎಂದು ಜೈನರು ಹೇಳಿ ಜ್ಞಾನದ, ಕರ್ಮದ, ಅಂತದೃಷ್ಟಿಯ ಅಗತ್ಯ ಒಪ್ಪಕೊಂಡಿದ್ದರೆ. ಮುಕ್ತಿ ತಾನಾಗಿಯೇ ಎಷ್ಟುಮಾತ್ರಕ್ಕೂ ಲಭಿಸತಕ್ಕದ್ದಲ್ಲ, ದೃಢಪ್ರಯತ್ನದಿಂದಲೇ ಸಾಧ್ಯ. ಅನೇಕ ಜನ್ಮ ಪರ್ಯಂತ ಹೆಣಗಾಡಿ ಮುಕ್ತಿಯನ್ನು ಪಡೆದುಕೊಳ್ಳಬೇಕು. ಮುಕ್ತಿ ಪಡೆದು ಜೀವ ಲೋಕಾಕಾಶ ದಾಟಿ ಸಿದ್ಧರ ಕ್ಷೇತ್ರ ಹೊಕ್ಕು ಅಲ್ಲಿ ಅನಂತಚತುಷ್ಟಯಗಳನ್ನು ಅನುಭವಿಸುತ್ತ ಸ್ಥಿರವಾಗಿ ಉಳಿಯುತ್ತಾನೆ. ಅಲ್ಲಿಂದ ಮುಂದೆ ಅವನಿಗೆ ಸಂವೃತಿ, ಸಂಸಾರ ಇರುವುದಿಲ್ಲ. 

	ಬೌದ್ಧರು ಮುಕ್ತಿಯನ್ನು ನಿರ್ವಾಣವೆಂದು ವ್ಯವಹರಿಸುತ್ತಾರೆ. ಪಾಳಿವಾಙ್ಮಯದಲ್ಲಿ ಮುತ್ತಿ (ಮುಕ್ತಿ), ವಿಮುತ್ತಿ ಮೋಕ್ಖ (ಮೋಕ್ಷ), ನಿಬ್ಬಾಣ (ನಿರ್ವಾಣ), ಅರಹತ್ತಾ (ಅರ್ಹತತ್ತ್ವ) ಮುಂತಾದ ಮಾತುಗಳನ್ನು ಸಾಮಾನಾರ್ಥದಲ್ಲಿ ಬಳಸಿದ್ದಾರೆ. ಕೃಷ್ಣಾಮೂಲವಾದ ಸಂಸಾರವನ್ನು ಭವವೆಂದೂ ಇದು ಪ್ರವಾಹರೂಪವೆಂದೂ (ಭವಸ್ರೋತ) ಹೇಳಿ ಅದರಿಂದ ದುಃಖಸ್ಕಂದ ಉಂಟಾಗುವುದೆಂದೂ ನಿರ್ದೇಶಿಸುತ್ತಾರೆ. ಈ ದುಃಖದಿಂದ ಪಾರಾಗುವುದೇ ಮುಕ್ತಿ. ಭವದಲ್ಲಿ ಸಂತರಣಮಾಡುತ್ತಿರುವ ಆತ್ಮಭಾವವೇ ಈ ದುಃಖಕ್ಕೆ ಭಾಜನವಾದದ್ದು. ತೃಷ್ಣಾಕ್ಷಯವಾದರೆ ಈ ಆತ್ಮಭಾವ ಮರೆಯಾಗಿ ಭವ ಇಂಗುತ್ತದೆ. ಇದಕ್ಕಾಗಿ ಮನುಷ್ಯ ಅನುಸ್ರೋತಗಾಮಿ (ಎಂದರೆ ಭವಹರಿದಂತೆ ಹೋಗುವುದು) ಆಗದೆ. ಪ್ರತಿಸ್ರೋತಗಾಮಿ (ಭವಕ್ಕೆ ವಿರುದ್ಧವಾಗಿ ಹೋಗುವುದು) ಆಗಬೇಕು. ಹಾಗಾದರೆ ಮಾತ್ರ ಭವದಿಂದ ಮುಕ್ತಿ ಸಾಧ್ಯ. ಪುನರ್ಭವವಿಲ್ಲದಿರುವುದು ಮುಕ್ತಿ ಎಂದು ಬುದ್ಧ ತನ್ನ ಸಂಬೋಧಿಯ ಸಮಯದಲ್ಲಿ ಕಂಡುಕೊಂಡ (ನತ್ಥಿದಾನಿ ಪುನಬ್ಭವೋ). ಅಷ್ಟಾಂಗಿಕ ಮಾರ್ಗಗಳನ್ನು ಅನುಸರಿಸಿ ಧಾನ್ಯದಲ್ಲಿ ಕುಳಿತ ಗೋತಮ ಸಂಬೋಧಿಯನ್ನು ಪಡೆದು ಎಲ್ಲ ದುಃಖಗಳನ್ನು ಕಡೆಗಾಣಿಸಿದ (ಸಮ್ಮಾದುಕ್ಖಸ್ಯ ಅಂತಕಿರಿಯ), ಅದೇ ತನ್ನ ಕಡೆಯ ಜನ್ಮವೆಂದು (ಅಯಂ ಅಂತಿಮಾ ಜಾತಿ) ಕಂಡುಕೊಂಡ ವಿಮುಕ್ತಿಸುಖವನ್ನು ಅನುಭವಿಸಿದ. ಈ ಗಾಹೆಯಲ್ಲಿ ಚೆತೋವಿಮುತ್ತಿ ಅಕುಪ್ಪಾ ಎಂದು ನಿರ್ದೇಶಿಸಿರುವುದು ಗಮನಾರ್ಹ. ಅದು ಮನಸ್ಸಿನ ವಿಮೋಕ್ಷವೆಂದು ತಾತ್ಪರ್ಯ. ಮನಸ್ಸೇ ಬಂಧಕ್ಕೆ ಕಾರಣವೆಂದು ಬೌದ್ಧರ ವಿಶ್ವಾಸ (ಮನೋಪುಬ್ಬಂಗಮಾಧಮ್ಮಾ ಮನೋಸೇಟ್ಠಾ ಮನೋಮಯಾ). ಬೌದ್ಧರು ಅನಾತ್ಮವಾದಿಗಳು. ಮುಕ್ತಿ ಆತ್ಮತತ್ತ್ವಕ್ಕೆ ಸಂಬಂಧಪಟ್ಟದ್ದು ಎಂದು ಅವರು ನಂಬುವುದಿಲ್ಲ. ಮುಕ್ತಿ ಸ್ವಾತಂತ್ರ್ಯ, ಉಪಾದಾನಗಳಿಂದ ನಿರಾಲಂಬ; ಗಾಲಿಯಿಂದ ಕೈ ಹೇಗೆ ಬದ್ದವಲ್ಲವೋ ಹಾಗೆ ಮುಕ್ತನಾದವನ ಮನಸ್ಸಯ ಭವದಿಂದ ಬದ್ಧವಲ್ಲ. ಮುಕ್ತಿ ಎಂಬ ಮಾತನ್ನು ಬೌದ್ಧರು ಬಿಡುಗಡೆ ಎಂಬ ಅರ್ಥದಲ್ಲಿಯೇ ವಿಶೇಷವಾಗಿ ಬಳಸುತ್ತಾರೆ. ಸಮ್ಮದಜ್ಞಾವಿಮುತ್ತನ (ಸಮ್ಯಕ್ ಜ್ಞಾನದಿಂದ ವಿಮುಕ್ತನಾದವ) ಪ್ರಸ್ತಾಪ ಬಂದಾಗ ಇದು ಸ್ಪಷ್ಟವಾಗುತ್ತದೆ. ಹೇಗೆ ಮುಕ್ತನಾದವನಿಗೆ 'ನಾನು ಮುಕ್ತ ಎನ್ನುವ ಬೋಧೆಯೂ ಬರುತ್ತದೆ: ಇದೇ ಮುಕ್ತಿಸುಖವನ್ನು ಅನುಭವಿಸುವುದು (ಮುಕ್ತಿ ಸುಖಂ ಪಟಿಸಂವೇದಿ). ಯಾವುದರಿಂದ ಬಿಡುಗಡೆ ಎನ್ನುವ ಪ್ರಶ್ನೆಗೆ ಉತ್ತರ ಚೇತೋ ವಿಮುತ್ತಿ, ಪಜ್ಞಾವಿಮುತ್ತಿ ಎನ್ನುವ ಪ್ರಕ್ರಿಯೆಗಳಿಂದ ದೊರೆಯುತ್ತದೆ. ಹೃದಯದ ಬಂಧಗಳಿಂದಲೂ ಪ್ರಜ್ಞಯ ಸಿಲುಕುಗಳಿಂದಲೂ ಬಿಡುಗಡೆ. ಇದನ್ನೇ ಬೌದ್ಧರು ಅರಹತ್ತಾ ಎಂದು ವ್ಯವಹರಿಸುತ್ತಾರೆ. ವಿಮುಕ್ತಿ ರತ್ನ (ವಿಮುಕ್ತಿರತನ) ಪಡೆದುಕೊಂಡವ ಅರಹ (ಅರ್ಹತ್) ಎಂದು ಹೇಳುತ್ತಾರೆ. ಶೀಲ, ಸಮಾಧಿ. ಪ್ರಜ್ಞೆ ಇವು ಮೂರು ಮುಕ್ತಿಗೆ. ಅರ್ಹತತ್ವಕ್ಕೆ ಮಾರ್ಗಗಳು.

	ಬೌದ್ಧರ ಮುಕ್ತಿ ಶೂನ್ಯವೆಂದು ಒಂದು ವಾದವಿದೆ. ನಿಬ್ಬಾಣ, ನಿಬ್ಬುತ, ಸೀತಿಭೂತ ಎನ್ನುವ ಮಾತುಗಳಲ್ಲಿ ದೀಪ ಆರಿಹೋಗುವುದು ಎಂದು ಅರ್ಥವಿದೆ. ಮುಕ್ತಿಸುಖವನ್ನು ಅನುಭವಿಸುವ ಆತ್ಮತತ್ವವನ್ನು ಅವರು ಒಪ್ಪಿಕೊಳ್ಳದೆ ಇರುವುದರಿಂದ ಅವರ ನಿರ್ವಾಣ ನಿರ್ದಿಷ್ಟವಾದ ಒಂದು ಸ್ಥಿತಿಯಲ್ಲ. ತೃಷ್ಣಾಕ್ಷಯ. ಭವದ ಅಭಾವ, ದುಃಖಸ್ಕಂಧದ ಅಸ್ತಂಗಮ ಇದೇ ನಿರ್ವಾಣವೆನಿಸಿಕೊಳ್ಳುತ್ತದೆ. ಆದರೆ ಬೌದ್ಧರು ಮರಣಾನಂತರದ ಮುಕ್ತಿಯನ್ನು ಮಾತ್ರವೇ ಒಪ್ಪಿಕೊಂಡಿಲ್ಲ, ಬದುಕಿರುವಾಗಲೂ ಅರ್ಹತತ್ವ ಪ್ರಾಪ್ತಿ ಸಾಧ್ಯ. ಬುದ್ಧ ಜೀವಂತನಾಗಿರುವಾಗಲೇ ನಿರ್ವಾಣ ಪಡೆದಿದ್ದನಷ್ಟೆ. ಇದನ್ನು 'ಸ ಉಪಾದಿಸೇನನಿಬ್ಬಾಣ' (ಜೀವನ್ಮುಕ್ತಿ) ಎನ್ನುತ್ತಾರೆ ಶರೀರ ಪಾತವಾದಾಗ ಪರಿನಿರ್ವಾಣ, ಜೀವನ ಮುಕ್ತಿಯ ಸ್ಥಿತಿಯಲ್ಲಿ ಅಚಲವಾದ ಶಾಂತಿ, ಅಕ್ಷೋಭ್ಯವಾದ ಚೇತೋವಿಮುಕ್ತಿಯನ್ನು ಅರ್ಹತ ಅನುಭವಿಸುತ್ತಾನೆ. ಈ ದೃಷ್ಟಿಯಿಂದ ನಿರ್ವಾಣ ಕೇವಲ ಶೂನ್ಯ ಎನ್ನಲಾಗದು. ವಿಜ್ಞಾನವಾದಿಗಳು ಇದನ್ನು ವಿಜ್ಞಪ್ತಿಮಾತ್ರತ ಎಂದಾಗ ಇದನ್ನು ಅಚಿಂತ್ಯವೆಂದೇ ನಿರ್ದೇಶಿಸಿದರು. ಪುದ್ಗಲನೈರಾತ್ಮ್ಯವೇ ಇದರ ತಾತ್ಪರ್ಯ. ಅದರಲ್ಲಿ ಗ್ರಾಹ್ಯ ಗ್ರಾಹಕಭೇದವಿರದು, ದ್ರವ್ಯಾನೇಕತ್ವವಿಲ್ಲ. ಅದು ಕೇವಲ ಬದ್ಧರಿಗೆ ಮಾತ್ರ ವೇದ್ಯವಾದುದು. ಇದಕ್ಕೆ ವ್ಯತಿರಿಕ್ತವಾದ ಸಂವೃತಿಯೂ ಕಲ್ಪಿತವೇ, ಭ್ರಾಂತಿಯೇ ಲಂಕಾವತಾರಸೂತ್ರ ಇದನ್ನೇ ಆಲಯವಿಜ್ಞಾನವೆಂದು ವ್ಯವಹರಿಸುತ್ತದೆ. ಪಾಳಿವಾಙ್ಮಯದಲ್ಲಿಯೂ ಭವಂಗಸ್ರೋತದ ಕಲ್ಪನೆಯಿದ್ದು ಪ್ರತಿಯೊಂದು ವ್ಯವಹಾರಿಕ ಕ್ರಿಯೆಯೂ ಭವಂಗಚಲನೆಯೆಂದೂ ಭವಂಗಪಾತ ಅದರ ಚರಮಾವಸ್ಥೆಯೆಂದೂ ಹೇಳಿದೆ. ವ್ಯವಹಾರಿಕ ನೆಲೆಯಲ್ಲಿ ವೀಥಿಭವಂಗವೆಂದೂ ಪಾರಮಾರ್ಥಿಕ ನೆಲೆಯಲ್ಲಿ ಕೇವಲ ಭವಂಗವೆಂದೂ ಪ್ರಕ್ರಿಯೆಯಿದೆ. ಇದೇ ವಾದವನ್ನು ಅದ್ವೈತದಲ್ಲಿಯೂ ಕಾಣಬಹುದು. ಗೌಡಪಾದರ ಮಾಂಡೂಕ್ಯಕಾರಿಕೆಯಲ್ಲಿ ಸಂಸಾರ ಹೂತ ಚಕ್ರದಂತೆ ಪ್ರಾತಿಭಾಸಿಕ ಸತ್ಯವೇ ವಿನಾ ಮೂಲತಳ, ಸಾರತ: ಅದ್ವೈತಬ್ರಹ್ಮವೇ ಸಿದ್ಧವೆಂದು ಹೇಳಿರುವುದು ಬೌದ್ಧಸಂಪ್ರದಾಯದ ಪ್ರಭಾವವನ್ನು ತೋರಿಸುತ್ತದೆ. ಶಂಕರಾಚಾರ್ಯರು ವ್ಯಾವಹಾರಿಕ (ಸಂಸ್ಕøತಿ), ಪಾರಮಾರ್ಥಿಕ ಸತ್ಯಗಳನ್ನು ಹೇಳುವಾಗಲೂ ಇದೇ ವಾದದ ಚಾಯೆ ಕಾಣಬಹುದು. ಮುಕ್ತಿಸ್ಧಿತಿಯನ್ನು ಅದ್ವೈತಿಗಳು ಅನಿರ್ವಾಚ್ಯ, ಸದಸದ್ವಿಪರೀತಲಕ್ಷಣ ಎಂದು ನಿರ್ದೇಶಿಸುವುದು ಗಮನಾರ್ಹವಾಗಿದೆ. ಅದು ನಿಷ್ಟ್ರಪಂಚಸ್ಧಿತಿ, ಎಲ್ಲ ಸಂಸ್ಕಾರಗಳೂ ಮೃಷ, ಮೋಷಧರ್ಮಗಳು; ನಿರ್ವಾಣವೊಂದೇ ಅಮೋಘಧರ್ಮ, ಅದೇ ಸತ್ಯವಾದುದು ಎಂದು ಮಾಧ್ಯಮಿಕವಾದಿಗಳು ನಿಲವು. ಆದರೆ ತಾತ್ತ್ವಿಕ ನೆಲೆಯಲ್ಲಿ ಬಂಧ-ಮೋಕ್ಷಗಳೆರಡೂ ಇಲ್ಲ. ನಿರ್ವಾಣ ಎನ್ನುವುದು 'ಇದೆ ಎಂಬಂತೆ ಭಾವವಲ್ಲವೆಂದು ನಾಗಾರ್ಜುನನವಾದ; ಅದಕ್ಕೆ ಜನ್ಮ, ಜರಾ, ಮರಣಗಳಿಲ್ಲವಾದುದರಿಂದ ಅದನ್ನು 'ಭಾವ ಎನ್ನಲಾಗದು. ಆದರೆ ಅದನ್ನು 'ಇಲ್ಲ (ಅಭಾವ) ಎನ್ನುವಂತೆಯೂ ಇಲ್ಲ. ಎರಡಕ್ಕೂ ಮೀರಿದುದು ಅದು ಸಂಸಾರ- ನಿರ್ಮಾಣಗಳಲ್ಲಿ ಅತ್ಯಂತ ಭೇದವಿಲ್ಲದುದರಿಂದ ಇದೆ ಇಲ್ಲ ಎನ್ನುವ ಎರಡೂ ಸಿದ್ಧಿಸುತ್ತದೆ. ನಿರ್ವಾಣವೇ ಆತ್ಯಂತಿಕವಾದುದರಿಂದ ಎರಡನ್ನೂ ಮೀರುತ್ತದೆ.

	ಮಹಾಯಾನ ಪಂಥದ ಪ್ರಕ್ರಿಯೆಯಲ್ಲಿ ಮುಕ್ತಿ ಬಂದ ಧಾತುವಿನ ಕಲ್ಪನೆಯನ್ನು ತಳೆಯಿತು. ತಥಾಗತಗರ್ಭ. ಭೂತತಥತಾ, ಪರಮಾರ್ಥ ಎನ್ನುವ ಮಾತುಗಳು ಇದೇ ನೆಲೆಯಲ್ಲಿ ಪ್ರಸಿದ್ಧವಾದವು. ಸ್ವಸ್ವಭಾವರಹಿತವಾದ ಎಲ್ಲ ಧರ್ಮಗಳಿಗೂ ಉತ್ಪತ್ತಿ-ವಿನಾಶ ಎನ್ನುವುದಿಲ್ಲವಾದುದರಿಂದ ಸಂಸಾರ-ಮುಕ್ತಿ ಎನ್ನುವ ಭೇದ ಘಟಿಸುವುದಿಲ್ಲ. ಚಿತ್ತವೃತ್ತಿನಿರೋಧದಿಂದ ಸಮಾಧಿ ಪಡೆದಾಗ ಮನುಷ್ಯ 'ಅಧಿಚಿತ್ತ ನಾಗುತ್ತಾನೆ. ಇದನ್ನು ಜೀವನ್ಮುಕ್ತಿ ಎನ್ನಬಹುದು. ಇದರಿಂದ 'ವಿಪಶ್ಯನ ಎನ್ನುವ ಸಮಗ್ರ ಪ್ರಜ್ಞೆ ಒದಗಿ ಮಾಯೆಯ ಕವಚ ಮುರಿಯುತ್ತದೆ. ಇಲ್ಲಿ ಚಿತ್ತ ಅಪ್ರತಿಷ್ಠವಾದುದು. ನಿರಾಲಂಬವಾದುದು, ನಿರಪೇಕ್ಷವಾದುದು, ನಿರುಪಾದಿಕವಾದುದು, ನಿಷ್ಕ್ರಿಯವಾದುದು, ನಿರಾಲಂಬವಾದುದು, ನಿರಪೇಕ್ಷವಾದುದು, ನಿರುಪಾದಿಕವಾದುದು, ನಿಷ್ಕ್ರಿಯವಾದುದು. ಇಂಥ ಸ್ಥಿತಿಯೇ ಮುಕ್ತಿ ಎನ್ನುವ ಕಲ್ಪನೆ ಚೀನ, ಜಪಾನ್ ದೇಶಗಳ ಬೌದ್ಧ ಪಂಥಗಳಲ್ಲಿ ಬೆಳೆದು ಬಂದಿತು.

	ಅರಬ್ಬೀದರ್ಶನಗಳಲ್ಲಿ ಕೂಡ ಪರಮಾರ್ಥದ ಕಲ್ಪನೆ ಒದಗಿ ಬಂದು ಮುಕ್ತಿಯ ಉಲ್ಲೇಖವಿದೆ. ಈಶ್ವರನ ವಿಷಯವಾಗಿ ಶ್ರದ್ಧೆಯೇ ಪರಮ ಉಪಾದೇಯ; ನಿರಪೇಕ್ಷವಾದ ಅವನ ಅನುಗ್ರಹದಿಂದ ಅಮಿಕ್ರಿತವಾದ ಸುಖ ಒದಗುವುದೇ ಮುಕ್ತಿ. ಅಲ್ಲಿಯ ರಹಸ್ಯವಾದಿಗಳು ಅಹ್ಯಾಉಲ್-ಉಲೂಮ್ ಅನ್ನು (ವಿದ್ಯಾ-ಸಂಜೀವಿನಿ) ಎತ್ತಿಹಿಡಿದು ಜ್ಞಾನದಿಂದಲೇ ಮುಕ್ತಿ ಎನ್ನುವ ಕಲ್ಪನೆ ಮೂಡಿಸಿದ್ದಾರೆ. ಯಹೂದ್ಯರು ಈಶ್ವರನ ಪ್ರಯೋಜನಕ್ಕಾಗಿಯೇ ಪ್ರಕೃತಿ ಕಾರ್ಯರಂಗ ಎನ್ನುವ ನಿಲವು ತಳೆದು ಈ ನೆಲೆಯಲ್ಲಿ ಮನುಷ್ಯ ಧರ್ಮಕರ್ತವ್ಯ ಮಾಡಿ ಪುಣ್ಯ ಹೊಂದಿ ಸ್ವರ್ಗ ಸೇರುತ್ತಾನೆ. ಇವರಲ್ಲಿ ಮುಕ್ತಿಯೆಂದರೆ ಪರಮಾತ್ಮನ ಸಾನಿಧ್ಯ ಪಡೆದು ಸುಖಿಯಾಗಿರುವುದಷ್ಟೇ. ಯೆಹೂದೀ ದರ್ಶನದಲ್ಲಿ ಅರಬ್ ದರ್ಶನದ ಮತ್ತು ಗ್ರೀಕ್ ತತ್ತ್ವಜ್ಞಾನದ ಪ್ರಭಾದವನ್ನು ಕಾಣಬಹುದು. ಇಸ್ಲಾಮ್ ಧರ್ಮದಲ್ಲಿ ದಿವ್ಯಹ್ರದ (ಅಲ್-ಹಾತ್) ಎಂಬುದೇ ಮುಕ್ತಿಯ ಕಲ್ಪನೆ; ಅದು ಸ್ವರ್ಗ ನರಕ ಎರಡನ್ನೂ ಮೀರಿದುದು. ಅವರೂ ತರ್ಕದ ನೆಲೆ ಮೀರಿದ ದಿವ್ಯಜ್ಞಾನವನ್ನು ಒಪ್ಪಿಕೊಳ್ಳುತ್ತಾರೆ. ಇವರಲ್ಲಿ ಆತ್ಮ ಅಮೃತವಾದುದು, ಅದಕ್ಕೆ ಮರಣಾನಂತರ ಪುನರುತ್ಧಾನವುಂಟು. ಭಗವಂತನಿಂದ ಅಂತಿಮ ನಿರ್ಣಯವಾಗುವುದು ಮುಕ್ತಿಯ ಅನುಗ್ರಹವೇ. ಈ ದರ್ಶನಗಳಲ್ಲಿಯೂ ಕ್ರೈಸ್ತದರ್ಶನದಲ್ಲಿಯೂ ಸಾಲ್ವೇಷನ್ ಎನ್ನುವ ಕಲ್ಪನೆಯಿದೆಯಾದರೂ ಮುಕ್ತಿ ಎನ್ನುವ ಭಾವನೆ ದೃಢವಾಗಿ ಬೆಳೆದು ಬರಲಿಲ್ಲ. ರಾಗದ್ವೇಷಾದಿ ದ್ವಂದ್ವಗಳಿಂದ ದೂರವಾದ ತಟಸ್ಧಸ್ಧಿತಿ ಅವರಿಗೆ ಮಾನ್ಯವೆನಿಸಲಿಲ್ಲ. ಅವರಿಗೆ ಪರಮಸ್ಥಿತಿಯೆಂದರೆ ಸ್ವರ್ಗ; ಅಲ್ಲಿ ನಿರಂತರ ಸುಖವೇ ಅವರ ಪಾಲಿಗೆ ಬರುವುದು. ಈ ಸುಖದಲ್ಲಿ ಲೌಖಿಕಸುಖದ ಛಾಯೆಯೇ ಇರುವುದು ಗಮನಾರ್ಹ. ಶಾಂತಿ ಪರಮಾವಸ್ಥೆಯೆಂದು ಅವರು ಒಪ್ಪಿಕೊಳ್ಳಲಿಲ್ಲ. ಆದರೆ ಈ ಪರಮಾಸ್ಥೆಯ ಪ್ರಾಪ್ತಿಗೆ ಭಗವಂತನ ಅನುಗ್ರಹ ಮತ್ತು ಜ್ಞಾನ ಇವು ಕಾರಣವೆಂದು ಮಾತ್ರ ಸಮ್ಮತಿಸಿದ್ದಾರೆ.								
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ